ಚಿಕ್ಕೋಡಿ : ಯುವಕನೊಬ್ಬ ತನ್ನನ್ನು ಪ್ರೀತಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ಪ್ರಕಾಶ್ ರಜಪೂತ ಎಂಬಾತ ತನಗೆ ಮೋಸ ಮಾಡಿರುವುದಾಗಿ ಆರೋಪಿಸಿ ಇದೇ ಗ್ರಾಮದ ಯುವತಿ ಈತನ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಸುಮಾರು ಐದು ವರ್ಷಗಳಿಂದ ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಮಂಜುನಾಥ ದೈಹಿಕ ಸಂಪರ್ಕವನ್ನೂ ಮಾಡಿದ್ದಾನೆ. ಆದರೆ, ಇದೀಗ ಆತ ನನಗೆ ಮೋಸ ಮಾಡಿ ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾನೆ ಎಂದು ನೊಂದ ಯುವತಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾಳೆ.
ಇತ್ತೀಚೆಗೆ ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಸಿ ವಿನಂತಿ ಮಾಡಿಕೊಂಡಿದ್ದೆ. ಆಗ ಮನೆಯವರ ಸಮ್ಮುಖದಲ್ಲಿಯೇ ಮಂಜುನಾಥ ಎರಡು ದಿನಗಳ ಕಾಲಾವಕಾಶ ಕೇಳಿದ್ದ. ಅದಾದ ಬಳಿಕ ಮೇ 28ಕ್ಕೆ ವಿವಾಹ ನೋಂದಣಿ ಕೇಂದ್ರದ ಹತ್ತಿರ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ, ವಕೀಲರು ಹಾಗೂ ನಾನು ಅವನಿಗಾಗಿ ಕಾದೆವು. ಆದರೆ, ಅಂದು ಮಂಜುನಾಥ ಬರಲಿಲ್ಲ. ಆಗ ಮತ್ತೆ ಪೊಲೀಸ್ ಠಾಣೆಗೆ ಬಂದು ಮಂಜುನಾಥನನ್ನು ಕರೆಸಲು ಹೇಳಿದೆ. ಮತ್ತೆ ಪೊಲೀಸ್ ಠಾಣೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಕೈ-ಕಾಲು ಹಿಡಿದು ಮದುವೆಗೆ ಒಪ್ಪಿಸಿದೆ.
ಒಪ್ಪಿಕೊಂಡ ಮಂಜುನಾಥ ಮರುದಿನ ಕಾಲುಂಗರ ಹಾಗೂ ತಾಳಿ ತೆಗೆದುಕೊಂಡು ಬಂದಿದ್ದ. ಆದ್ರೆ, ಕಿರಣ್ ರಜಪೂತ ಎನ್ನುವರು ಬಂದು ಈ ಮದುವೆ ಮಾಡ್ಕೋಬೇಡ, ಇದರಿಂದ ತೊಂದರೆ ಅನುಭವಿಸಬೇಕಾಗುತ್ತೆ ಎಂದು ನನಗೆ ಧಮ್ಕಿ ಹಾಕಿದ್ದಾನೆ. ಅಲ್ಲದೇ, ನಿನಗೆ ಹಣ ಕೊಡುತ್ತೇವೆ. ಇಷ್ಟಕ್ಕೆ ಸುಮ್ಮನಾಗು. ಮುಂದುವರೆದು ದೂರು ಕೊಟ್ಟರೆ, ನಾವು ಬೇಲ್ ಮೇಲೆ ಮತ್ತೆ ಹೊರಬರುತ್ತೇವೆ. ಇದರಿಂದ ನಿನಗೆ ತೊಂದರೆ ಎಂದು ಜಾತಿ ಕಾರಣ ಕೊಟ್ಟು ಬೆದರಿಕೆ ಹಾಕಿದ್ದ.
ಇದಾದ ಬಳಿಕ ನಾನು ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ವರ ವಿರುದ್ಧ ದೂರು ದಾಖಲಿಸಿದ್ದೆ. ಅದರಲ್ಲಿ ಮಂಜುನಾಥ ಮಾತ್ರ ಅರೆಸ್ಟ್ ಆಗಿದ್ದು, ಇನ್ನುಳಿದ ಮೂವರು ಆಗಿಲ್ಲ. ಉಳಿದವರನ್ನು ಏಕೆ ಬಂಧಿಸಿಲ್ಲ ಎಂದು ಕೇಳಿದ್ದಕ್ಕೆ ಠಾಣೆಯ ಪಿಎಸ್ಐ ಸಾಹೇಬರು ಸಹ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಆರೋಪಿಸಿದ್ದು ಕಿರಣ್ನನ್ನು ಬಂಧಿಸಬೇಕು, ನನಗೆ ನನ್ನ ಹುಡುಗ ಸಿಗಬೇಕು ಎಂದು ಅಳಲು ತೋಡಿಕೊಂಡಿದ್ದಾಳೆ.
ಯುವತಿಯೂ ಕಳೆದ ಮೂರು ತಿಂಗಳಿನಿಂದ ಈ ಹೋರಾಟ ನಡೆಸುತ್ತಿದ್ದು ನ್ಯಾಯ ಕೊಡಿಸುವಂತೆ, ಅಂಬೇಡ್ಕರ್ ಜನಜಾಗೃತಿ ವೇದಿಕೆ ಸಂಘ ಹಾಗೂ ವಾಲ್ಮೀಕಿ ಯುವ ವೇದಿಕೆ ಸಂಘಟನೆಗಳು ಬೆಂಬಲ ಸೂಚಿಸಿವೆ.