ಚೆನ್ನಮ್ಮನ ಕಿತ್ತೂರು (ಬೆಳಗಾವಿ): ಚಾಲಕನೊಬ್ಬ ಕುಡಿದು ನಿಯಂತ್ರಣ ತಪ್ಪಿದ ಪರಿಣಾಮ ಲಾರಿಯೊಂದು ನಡು ರಸ್ತೆಯಲ್ಲಿಯೇ ಪಲ್ಟಿಯಾದ ಘಟನೆ ಇಂದು ಕಿತ್ತೂರಿನ ಕೋಟೆ ರಸ್ತೆಯಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ದೇಶದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆದುದರಿಂದ ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಗೊಳಿಸಿ ಮದ್ಯದಂಗಡಿಗಳನ್ನು ತೆರೆಯುವಂತೆ ಆದೇಶಿಸಿದ ಬೆನ್ನಲೆ ಲಾರಿ ಚಾಲಕನೊಬ್ಬ ಕಂಠಪೂರ್ತಿ ಸಾರಾಯಿ ಕುಡಿದು ವಾಹನ ಚಾಲನೆ ಮಾಡಿದ್ದರ ಪರಿಣಾಮ ಮೆಡಿಕಲ್ ಶಾಪ್, ಕಿರಾಣಿ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ವಿದ್ಯುತ್ ಸರ್ವಿಸ್ ತಂತಿ ವಾಹನದ ಮೇಲೆಯೇ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಸಣ್ಣಪುಟ್ಟ ಗಾಯಗೊಂಡಿದ್ದ ವಾಹನ ಚಾಲಕನನ್ನ ಪ್ರಾಥಮಿಕ ಚಿಕಿತ್ಸೆಗೆ ಕಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವಾಹನದ ಮೇಲಿನ ವಿದ್ಯುತ್ ತಂತಿ ತೆಗೆಯಲು ಪವರ್ ಮ್ಯಾನ್ಗಳು ಹರಸಾಹಸ ಪಡುತ್ತಿದ್ದು, ಸ್ಥಳಕ್ಕೆ ಕಿತ್ತೂರಿನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಿತ್ತೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.