ಚಿಕ್ಕೋಡಿ: ಕೋವಿಡ್ ಪರಿಣಾಮದಿಂದಾಗಿ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸೂಕ್ತ ವ್ಯವಸ್ಥೆಯಿಲ್ಲ. ಜೊತೆಗೆ ಹೋಟೆಲ್, ಮದುವೆ ಸಮಾರಂಭಗಳು ಅಷ್ಟಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರೈತರೊಬ್ಬರು ಬೆಳೆದ ಹಸಿಮೆಣಸು, ಡಬ್ಬು ಮೆಣಸು ಸೇರಿ ಸುಮಾರು 10 ಟನ್ನಷ್ಟು ಫಸಲು ನಾಶವಾಗಿದೆ.
ಮೇಖಳಿ ಗ್ರಾಮದ ಪ್ರಗತಿಪರ ರೈತ ಮಾರುತಿ ಸತ್ಯಪ್ಪ ಧನುಗೋಳ ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆದ ಹಸಿಮೆಣಸು, ಡಬ್ಬುಮೆಣಸು ಸೇರಿ ಸುಮಾರು 10 ಟನ್ನಷ್ಟು ಫಸಲು ಈಗ ಬೆಳೆದು ನಿಂತಿದೆ. ಆದರೆ ಸೂಕ್ತ ಬೆಲೆ ಇಲ್ಲದೆ ಸುಮಾರು 3ರಿಂದ 4 ಲಕ್ಷ ರೂ. ಹಣವನ್ನು ಕಳೆದುಕೊಳ್ಳುವ ಭಯದಲ್ಲಿ ರೈತ ಜೀವನ ಸಾಗಿಸುವಂತಾಗಿದೆ.
ಲಾಕ್‌ಡೌನ್ ಪರಿಣಾಮ ಸೂಕ್ತ ಬೆಲೆ ಸಿಗದೆ ಬೆಳೆದ ಫಸಲು ಹೊಲದಲ್ಲಯೇ ಇದೆ. ಇದಕ್ಕೆ ರೈತ ಸುಮಾರು 1 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆದರೆ ಖರ್ಚು ಮಾಡಿದ ಹಣ ಕೂಡ ಬಾರದಂತಾಗಿದ್ದು, ರೈತನ ಬದುಕು ದುಸ್ತರವಾಗಿದೆ.
ಈ ಬಗ್ಗೆ ರಾಯಬಾಗ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಅಶೋಕ ಕರೆಪ್ಪಗೋಳ ಫಸಲು ವೀಕ್ಷಣೆ ಮಾಡಿದರು. ಹೋಟೆಲ್, ಸೇರಿದಂತೆ ವ್ಯಾಪಾರ ವಹಿವಾಟು ಬಂದ್ ಆದ ಕಾರಣ ರೈತರಿಗೆ ತೊಂದರೆಯಾಗಿದೆ. ಅಲ್ಲದೆ ರೈತರಿಗೆ ಸೂಕ್ತ ಬೆಲೆ ಸಿಗದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಸರ್ಕಾರದ ಸಹಾಯಧನ ಸೇರಿದಂತೆ ಇತರ ಯೋಜನೆಗಳಿಂದ ರೈತರಿಗೆ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.