ಬೆಳಗಾವಿ: ಇಡೀ ವಿಶ್ವವೇ ಕೊರೊನಾ ವೈರಸ್ಗೆ ತಲ್ಲಣಗೊಂಡಿದೆ. ಸಾಕಷ್ಟು ಜನರು ಅನ್ನ, ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಒಂದು ಕಡೆ ಹೆಚ್ಚು ಕಾಲ ನೆಲೆಯಾಗಿ ನಿಲ್ಲದೆ, ಜೀವನೋಪಾಯಕ್ಕಾಗಿ ಸ್ಥಳದಿಂದ ಸ್ಥಳಕ್ಕೆ ಅಲೆಯುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುರಿಗಾಹಿಗಳ ಬದುಕು ಹೇಳತೀರದಂತಾಗಿದೆ.
ಮಾರ್ಚ್ 24ರಂದು ಪ್ರಧಾನಿ ಮೋದಿ ಘೋಷಿಸಿದ್ದ ಲಾಕ್ಡೌನ್ನಿಂದಾಗಿ ಕುರಿ ಕಾಯುವವರ ಬದುಕು ಇದೀಗ ದುಸ್ಥರವಾಗಿದೆ. ಮಾರುಕಟ್ಟೆಯಲ್ಲಿ ಮಾಂಸ ವ್ಯಾಪಾರ ಸಂಪೂರ್ಣ ಬಂದ್ ಆಗಿದೆ. ಅಲ್ಪಸ್ವಲ್ಪ ಕೂಡಿಟ್ಟ ದಿನಸಿಗಳೆಲ್ಲವೂ ಖಾಲಿ ಆಗಿವೆ. ಇನ್ನು ಗ್ರಾಮದೊಳಗೆ ಹೋಗಬೇಕೆಂದರೆ ಕೊರೊನಾ ವೈರಸ್ನಿಂದ ಊರೊಳಗೆ ಯಾರೂ ಸೇರಿಸಿಕೊಳ್ಳುತ್ತಿಲ್ಲ. ಗ್ರಾಮದ ಬಳಿಯ ಹೊಲಗಳಲ್ಲಿ ಮಾಲೀಕರು ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಸುಡು ಬಿಸಿನಲ್ಲೇ ಇರೋ ಕುರಿಗಾಹಿಗಳನ್ನ ನೋಡಿದ್ರೆ ಎಂತವರ ಹೃದಯ ಒಮ್ಮೆ ಕಲಕದೇ ಇರದು.
ಇದೀಗ ವೈರಸ್ನ ಭೀತಿಯಿಂದಾಗಿ ತಮ್ಮನ್ನ ಹೊಲದಲ್ಲಿ ಯಾರೂ ಸೇರಿಸಿಕೊಳ್ಳದ ಪರಿಣಾಮ ತಮ್ಮ ಕುದುರೆಗಳ ಮೇಲೆ ಪಾತ್ರೆ–ಪಗಡೆ, ಹಾಸಿಗೆ, ನೀರು, ಬಟ್ಟೆ–ಬರೆಗಳನ್ನು ಇಟ್ಟುಕೊಂಡು ಒಂದೂರಿಂದ ಒಂದೂರಿಗೆ ಸಾಗುತ್ತಾರೆ. ಇನ್ನು ತಮ್ಮ ರಕ್ಷಣೆಗಾಗಿ ನಾಯಿಗಳನ್ನು, ಹಾಲು–ಮೊಸರುಗಳಿಗಾಗಿ ಹಸುಗಳನ್ನು ಸಹ ತಮ್ಮೊಂದಿಗೆ ಸಲಹುತ್ತ ಸಾಗುತ್ತಿದ್ದು, ಇವರ ಬದುಕು ಸಂಕಷ್ಟದಲ್ಲಿ ಸಿಲುಕಿದೆ.