ಅಥಣಿ: ದಾರಿ ತಪ್ಪಿ ಬಂದ ಮಗುವನ್ನು ರಕ್ಷಿಸಿದ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಮಗುವನ್ನು ಹೆತ್ತ ಕುಟುಂಬದವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಪಟ್ಟಣದಲ್ಲಿ ನಡೆದಿದೆ.
![Local Congress Leader Reunite Kid With family by Using Social Network](https://etvbharatimages.akamaized.net/etvbharat/prod-images/kn-ath-02-22-gajanan-mangasuli-av-kac10006_22092020154145_2209f_1600769505_744.jpg)
ಪಟ್ಟಣದ ಸ್ಟೇಟ್ ಬ್ಯಾಂಕ್ ರಸ್ತೆಯೊಂದರಲ್ಲಿ ಆಟ ಆಡುತ್ತ ಮನೆಯಿಂದ ಹೊರಬಂದ ಪುಟಾಣಿ, ದಾರಿ ತಪ್ಪಿ ಅಳುತ್ತ ನಿಂತಿತ್ತು. ಇದನ್ನು ಗಮನಿಸಿದ ಗಜಾನನ ಮಂಗಸೂಳಿ ಮಗುವನ್ನು ವಿಚಾರಿಸಿದ್ದಾರೆ. ಆದರೆ, ಪುಟ್ಟ ಮಗು ಮಾಹಿತಿ ನೀಡದಿರುವುದನ್ನು ಮನಗಂಡು ಹಲವು ವಾರ್ಡ್ನಲ್ಲಿ ಸಂಚರಿಸಿ ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಪಾಲಕರು ಪತ್ತೆಯಾಗದ ಹಿನ್ನೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
![Local Congress Leader Reunite Kid With family by Using Social Network](https://etvbharatimages.akamaized.net/etvbharat/prod-images/kn-ath-02-22-gajanan-mangasuli-av-kac10006_22092020154145_2209f_1600769505_90.jpg)
ಪೊಲೀಸರ ಸಲಹೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ಕೊಡಲಾಗಿತ್ತು. ಅವರಿವರ ಸಲಹೆ ಮೇರೆಗೆ ಮಗುವಿನ ಫೋಟೋ ಹಾಗೂ ಸ್ಥಳದ ವಿವರಣೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿಬಿಟ್ಟಿದ್ದರು. ಇತ್ತ ಫೋಟೋ ವೈರಲ್ ಆಗುತ್ತಿದ್ದಂತೆ ಮಗುವಿನ ಪೋಷಕರು ಮಂಗಸೂಳಿ ಅವರನ್ನು ಸಂಪರ್ಕಿಸಿದ್ದಾರೆ. ದಾರಿ ತಪ್ಪಿ ಕಳೆದುಕೊಂಡಿದ್ದ ಮಗು ಮರಳಿ ತಾಯಿಯ ಮಡಿಲು ಸೇರಿದ್ದಕ್ಕೆ ಪೋಷಕರು ಕಣ್ಣೀರು ಹಾಕುತ್ತಾ ಧನ್ಯವಾದ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.