ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರು ಯಾವುದೇ ಕಾರಣಕ್ಕೂ ನಮ್ಮ ಕೈ ಬಿಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು 15 ಜನರನ್ನೂ ಲಿಂಗಾಯತ ಸಮುದಾಯವರು ಬೆಂಬಲಿಸಬೇಕೆಂದು ಮನವಿ ಮಾಡಿಕೊಂಡರು. 15 ಕ್ಷೇತ್ರಗಳಲ್ಲಿಯೂ ಗೆಲ್ಲುವ ಸಂಕಲ್ಪ ನಮ್ಮದಾಗಿದ್ದು, ಅದೇ ವಾತಾವರಣ ಇದೆ. ಕಾಂಗ್ರೆಸ್ ಜೆಡಿಎಸ್ ನಾಯಕರು ಏನೇ ಹೇಳಿದ್ರೂ 15 ಕ್ಷೇತ್ರಗಳಲ್ಲಿ ನಾವೇ ಗೆಲ್ತೇವೆ. ಜೊತೆಗೆ, ಮೂರುವರೆ ವರ್ಷ ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಗಮನ ಕೊಡುತ್ತೇನೆಂದರು.
ನಮ್ಮದು ಬಿಜೆಪಿ ವಿರುದ್ಧ ಹೋರಾಟ ಅಲ್ಲ ರಮೇಶ್ ವಿರುದ್ಧ ಹೋರಾಟ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಡಿ.9ನೇ ದಿನಾಂಕದಂದು ಫಲಿತಾಂಶ ಬಂದ ಮೇಲೆ ಯಾರ ಹೋರಾಟ ಯಾರ ವಿರುದ್ಧ ಎಂದು ಗೊತ್ತಾಗುತ್ತೆ. ಈಗಾಗಲೇ ವಿಜಯೋತ್ಸವ ರೀತಿ 35 ಸಾವಿರಕ್ಕಿಂತ ಹೆಚ್ಚು ಜನರು ಪ್ರಚಾರದ ವೇಳೆ ಸೇರಿದ್ದಾರೆ. ಎರಡನೇ ತಾರೀಖಿನಂದು ಮತ್ತೊಮ್ಮೆ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ ಎಂದರು.
ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡ್ತಿರಾ? ಎಂಬ ಪ್ರಶ್ನೆಗೆ, ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನನ್ನು ಬಿಡಬೇಕಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.