ಬೆಳಗಾವಿ : ಉನ್ನತ ವ್ಯಾಸಂಗ ಪಡೆಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಷ್ಯವೇತನ ರದ್ದುಪಡಿಸಿರುವ ಕ್ರಮ ಖಂಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೊ.ಎಸ್.ಎಸ್.ಮೂಕನವರ ಮಾತನಾಡಿ, ವಾಲ್ಮೀಕಿ ಸಮುದಾಯ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ (M.A, M.Com, M.Sc, B.Ed, B.E ), ಕಡುಬಡತನದಿಂದ ಕೂಡಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಶಿಷ್ಯವೇತನವನ್ನು ಈಗಿನ ಬಿಜೆಪಿ ಸರ್ಕಾರ ರದ್ದುಪಡಿಸಿದೆ.
ಇನ್ನು, ಶಿಷ್ಯವೇತನ ನಂಬಿ ಉನ್ನತ ಶಿಕ್ಷಣ ಪಡೆಯುತ್ತಿರುವ ರಾಜ್ಯದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳ ಜೀವನ ಬಹಳಷ್ಟು ಕಷ್ಟಕರವಾಗಿದೆ. ಹೀಗಾಗಿ ಶಾಸಕರು ಸೆ.21ರಿಂದ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯವನ್ನು ಮಂಡಿಸಿ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಪದಾಧಿಕಾರಿಗಳ ಮನವಿಗೆ ಸ್ಪಂದಿಸಿದ ಶಾಸಕ ಸತೀಶ್ ಜಾರಕಿಹೊಳಿ, ರಾಜ್ಯದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.