ಬೆಳಗಾವಿ : ಉರಿಗೌಡ ಮತ್ತು ನಂಜೇಗೌಡ ಸಿನಿಮಾ ಮಾಡಲು ಹೊರಟಿರುವವರ ಜೊತೆಗೆ ನಿರ್ಮಲಾನಂದ ಶ್ರೀಗಳು ಯಾವುದೇ ಕಾರಣಕ್ಕೂ ಮಾತುಕತೆ ನಡೆಸಬಾರದು ಇದರ ವಿರುದ್ಧ ಶ್ರೀಗಳೇ ಮುಂದಾಳತ್ವ ವಹಿಸಿ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೈಮುಗಿದು ಮನವಿ ಮಾಡಿದರು. ಬೆಳಗಾವಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈಗಾಗಲೇ ಶ್ರೀ ನಿರ್ಮಲಾನಂದ ಸ್ವಾಮೀಜಿಯವರಿಗೆ ಈ ಹೋರಾಟದ ನಾಯಕತ್ವವನ್ನು ನೀವೇ ವಹಿಸಬೇಕು. ನಮ್ಮ ಸಮಾಜದ ಧರ್ಮ ಕಾಪಾಡುವ ಕೆಲಸ ಮಾಡಬೇಕು ಎಂದು ಹೇಳಿದೀನಿ ಎಂದರು.
ಬಿಜೆಪಿಯವರು ಯಾವ ಸಿನಿಮಾವಾದರೂ ಮಾಡಲಿ, ಸಚಿವ ಅಶ್ವತ್ಥನಾರಾಯಣ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಥೆ ಬರೆಯಲಿ, ಶೋಭಕ್ಕ ಡೈರೆಕ್ಷನ್ ಮಾಡಲಿ, ಮುನಿರತ್ನ ಪ್ರೊಡಕ್ಷನ್ ಮಾಡಲಿ, ಇಂತಹ ನೂರು ಚಿತ್ರ ಮಾಡಿದರೂ ಹೆದರಲ್ಲ ಎಂದು ಡಿ ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟರು. ಇತಿಹಾಸವನ್ನು ಯಾವುದೇ ಕಾರಣಕ್ಕೂ ತಿರುಚಲು ಸಾಧ್ಯವಿಲ್ಲ. ಈ ರಾಜ್ಯದ ಅನೇಕರ ಇತಿಹಾಸ ತಿದ್ದಲು ಬಿಜೆಪಿ ಹೊರಟಿದ್ದು, ಬಿಜೆಪಿಯವರು ಕಾಲ್ಪನಿಕ ಕಥೆಯನ್ನ ಸೃಸ್ಟಿ ಮಾಡುತ್ತಿದ್ದಾರೆ. ಹೀಗಿರುವಾಗ ನಿರ್ಮಲಾನಂದ ಶ್ರೀಗಳು ಕರೆದು ಸಂಧಾನ ಮಾಡುವುದಾಗಲಿ ಅಥವಾ ತಿಳುವಳಿಕೆ ಹೇಳುವುದಾಗಲಿ ಮಾಡದೆ ಬಿಜೆಪಿ ವಿರುದ್ಧ ಹೋರಾಟದ ಹೆಜ್ಜೆ ಇಟ್ಟು ಈ ಸಮಾಜವನ್ನು ಉಳಿಸಬೇಕು. ಯಾರು ಇತಿಹಾಸವನ್ನು ಬದಲಾವಣೆ ಮಾಡಲು ಆಗಲ್ಲ. ಸಮಾಜಕ್ಕೆ ಶಾಂತಿ ನೆಲೆಸಲು ಮುಂದಾಳತ್ವವನ್ನು ವಹಿಸಿದ್ದೇನೆ ಎಂದು ಸ್ವಾಮೀಜಿ ಸಂದೇಶ ಕೊಡಬೇಕು ಎಂದು ಡಿ ಕೆ ಶಿವಕುಮಾರ್ ಅವರು ಮನವಿ ಸಲ್ಲಿಸಿದರು.
ಬಳಿಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಡಿ ಕೆ ಶಿವಕುಮಾರ್ ಅವರು, ನಾವು ಯಾರು ಸಿನಿಮಾ ಮಾಡಬೇಡಿ ಎಂದು ಹೇಳಿಲ್ಲ. ಯಾಕೆ ಇದೀಗ ಸಿನಿಮಾ ನಿಲ್ಲಿಸಿತ್ತಿದ್ದೀರ ಇವರ ಪಾರ್ಟಿ ಸ್ಟೋರಿಗಳನ್ನು ಮಾಡಿಕ್ಕೊಳ್ಳಲಿ, ಇದನ್ನ ಕ್ಷಮಿಸೋದಕ್ಕೆ ಸಾಧ್ಯವಿಲ್ಲ. ಶೋಭಕ್ಕ, ಸಿ ಟಿ ರವಿ ಆಶ್ವತ್ಥನಾರಾಯಣ ಅವರು ಏನೋ ಮಾತನಾಡುತ್ತಿದ್ದರು. ಯಾಕೆ ಈ ವಿಷಯದಿಂದ ದೂರ ಸರಿಯುತ್ತಿದ್ದೀರ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಜನರಿಗೆ ಮಿಸ ಗೈಡ್ ಮಾಡುತ್ತಿದ್ಧಾರೆ. ನಾವು ಬದುಕೋಕೆ, ಪ್ರಯತ್ನ ಮಾಡುತ್ತಿದ್ದೇವೆ. ಅದರೆ ಬಿಜೆಪಿಯವರು ಭಾವನೆಗಳ ಜೊತೆ ಹೋಗುತ್ತಿದ್ದಾರೆ ಎಂದರು.
ಟಿಪ್ಪು ವಿಚಾರ : ಟಿಪ್ಪು ಒಬ್ಬ ಮತಾಂಧ ಅವನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್ ಅವರು, ಶೋಭಕ್ಕ, ಸಿ ಟಿ ರವಿ, ಅಶ್ವತ್ಥನಾರಾಯಣ ಅವರಿಗೆ ಪಾಠ ಕಲಿಸಿದ ಮೇಷ್ಟ್ರುಗಳೇ.. ಇಂದು ನಾವು ಒಳ್ಳೆ ಪಾಠಗಳನ್ನು ಹೇಳಿಕೊಡಲಿಲ್ಲವಲ್ಲ ಎಂದು ಪಾಪ ಅವರೇ ವ್ಯಥೆ ಪಡುತ್ತಿದ್ದಾರೆ. ನಾವೆಲ್ಲ ಇವರಿಗೆ ಯಾವ ಯಾವ ಪಾಠ ಹೇಳಿಕೊಟ್ಟಿದ್ದೀರಿ ಎಂದು ಸಂಶೋಧನೆ ನಡೆಸಿ ಕೇಳಿದ್ದೀವಿ. ಆ ವೇಳೆ ನಾವು ಅವರಿಗೆ ಇಂತಹ ಟಿಪ್ಪು ಪಾಠ ಹೇಳಿಕೊಟ್ಟಿಲ್ಲ, ಏನಪ್ಪ ಇಂತಹ ಶಿಷ್ಯರನ್ನು ದೇಶಕ್ಕೆ ಕೊಟ್ಟಿದ್ದೇವೆ ಎಂದು ಮೇಷ್ಟ್ರುಗಳೇ ಗಾಬರಿಯಾಗಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ಇದನ್ನೂ ಓದಿ :ಉರಿಗೌಡ ನಂಜೇಗೌಡ ಸಿನಿಮಾಕ್ಕೆ ಬ್ರೇಕ್; ಶ್ರೀಗಳ ಭೇಟಿ ಬಳಿಕ ಯೂಟರ್ನ್ ಹೊಡೆದ ಸಚಿವ ಮುನಿರತ್ನ