ಬೆಳಗಾವಿ/ಬೆಂಗಳೂರು: ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಸದನಕ್ಕೆ ಮಾಹಿತಿ ನೀಡುವುದಾಗಿ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಇಂದು ಈ ವಿಚಾರ ಪ್ರಸ್ತಾಪಿಸಿದರು. ಹುಬ್ಬಳ್ಳಿಯ ಬೈರಿದೇವರಕೊಪ್ಪ ದರ್ಗಾವನ್ನು ಇಂದು ಏಕಾಏಕಿ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಐತಿಹಾಸಿಕ ಹಿನ್ನೆಲೆ ಒಳಗೊಂಡಿರುವ ಈ ದರ್ಗಾಗೆ ಸಾಕಷ್ಟು ದೊಡ್ಡ ಇತಿಹಾಸವಿದೆ. ಇದನ್ನು ತೆರವುಗೊಳಿಸುವ ಕಾರ್ಯ ನಿಲ್ಲಬೇಕು. ಸರ್ಕಾರ ಈ ವಿಚಾರವಾಗಿ ಸೂಕ್ತ ನಿರ್ಧಾರವನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾ ನಾಯಕರು, ಈ ಬಗ್ಗೆ ಮುಖ್ಯಮಂತ್ರಿಗಳಿಂದಲೇ ಸೂಕ್ತ ಮಾಹಿತಿ ಪಡೆದು ಸದನಕ್ಕೆ ತಿಳಿಸುತ್ತೇನೆ ಎಂದರು. ಸಭಾಪತಿ ಬಸವರಾಜ್ ಹೊರಟ್ಟಿ ಮಧ್ಯಪ್ರವೇಶಿಸಿ ಸಾಧ್ಯವಾದಷ್ಟು ಹಿಂದೆ ಈ ಬಗ್ಗೆ ಮಾಹಿತಿ ಪಡೆದು ವಿವರಣೆ ನೀಡಿ ಎಂದು ಸೂಚಿಸಿದರು.
ಜಾನುವಾರು ಸಮಸ್ಯೆ ಅರ್ಧ ಗಂಟೆ ಚರ್ಚೆ: ವಿಧಾನ ಪರಿಷತ್ನಲ್ಲಿ ಜಾನುವಾರುಗಳ ಚರ್ಮಗಂಟು ರೋಗಕ್ಕೆ ಸಂಬಂಧಿಸಿದ ಚರ್ಚೆಯನ್ನು ಅರ್ಧ ಗಂಟೆ ಅವಧಿಯ ಚರ್ಚೆಗೆ ಪರಿವರ್ತಿಸಿ ಸಭಾಪತಿಗಳು ನಿರ್ಧಾರ ಪ್ರಕಟಿಸಿದ್ದಾರೆ. ವಿಧಾನ ಪರಿಷತ್ನ 8 ಸದಸ್ಯರು ಒಟ್ಟಾಗಿ ಈ ಪ್ರಶ್ನೆಯನ್ನು ಕಾಂಗ್ರೆಸ್ ಸದಸ್ಯ ಮಧು ಜಿ ಮಾದೇಗೌಡ ಮಂಡಿಸಿದರು. ಇದಾದ ಬಳಿಕ ಮಾತನಾಡಿ, ಜಾನುವಾರುಗಳ ಆರೋಗ್ಯದ ದೃಷ್ಟಿಗೆ ಬಳಕೆಯಾಗುವ ಆ್ಯಂಬುಲೆನ್ಸ್ಗಳ ಕೊರತೆ ಇದೆ.
ಪರಿಹಾರ ಧನ ಕಡಿಮೆ ಇದೆ. ಎತ್ತುಗಳಿಗೆ ರೂ.30ಸಾವಿರ ಹಾಗೂ ಹಸುಗಳಿಗೆ 20 ಮತ್ತು ಕರುಗಳಿಗೆ 5 ಸಾವಿರ ರೂ. ನೀಡುತ್ತಿದೆ. ಇದು ಸಾಲುತ್ತಿಲ್ಲ, ಹೆಚ್ಚಿನ ಪರಿಹಾರ ಬೇಕು ಎಂದರು. ಬಿಜೆಪಿ ಸದಸ್ಯ ಎಸ್ ವಿ ಸಂಕನೂರ್ ಮಾತನಾಡಿ, ಈ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಬೇಕಿದೆ. ನಾನು ನಾಲ್ಕೈದು ಪ್ರಶ್ನೆಗಳನ್ನ ಕೇಳಲು ಬಯಸುತ್ತೇನೆ ಎಂದರು.
ಪ್ರಶ್ನೋತ್ತರ ಅವಧಿ ಅದಾಗಲೇ ಸಾಕಷ್ಟು ಸಮಯ ಪಡೆದಿದ್ದು, ಜೊತೆಗೆ ಬೇರೆ ಚರ್ಚೆಗೆ ಅವಕಾಶ ನೀಡಬೇಕಾದ ಹಿನ್ನೆಲೆ ಈ ಪ್ರಶ್ನೆಯನ್ನು ಅರ್ಧ ಗಂಟೆಗೆ ಪರಿವರ್ತಿಸಿ ಪ್ರತ್ಯೇಕ ಅವಕಾಶ ನೀಡುವುದಾಗಿ ಸಭಾಪತಿಗಳು ಭರವಸೆ ನೀಡಿದರು. ದೊಡ್ಡಬಳ್ಳಾಪುರದ ದೊಡ್ಡ ಬೆಳವಂಗಲ ಗ್ರಾಮ ಬಳಿ ಕಸದ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಯುವಕರ ಕುಟುಂಬಕ್ಕೆ ತಲ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, 10 ಲಕ್ಷ ರೂಪಾಯಿಗಳ ಚೆಕ್ಕುಗಳನ್ನು ಈಗಾಗಲೇ ಸರ್ಕಾರದಿಂದ ವಿತರಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಲಾರಿ ಡಿಕ್ಕಿಯಾಗಿ ಯುವಕರಿಬ್ಬರೂ ಸಾವನ್ನಪ್ಪಿರುವುದು ದುರದೃಷ್ಟಕರ. ಆದರೇ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ. ಬಾಕಿ ಉಳಿದ ತಲ ಹದಿನೈದು ಲಕ್ಷ ರೂಪಾಯಿಯನ್ನು ಸಹ ಆದಷ್ಟು ಬೇಗ ಮೃತರ ಕುಟುಂಬಕ್ಕೆ ಸಲ್ಲಿಸುತ್ತೇವೆ ಎಂದು ಕಾಂಗ್ರೆಸ್ ಸದಸ್ಯ ಪಿ ಆರ್ ರಮೇಶ್ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಬೀದಿನಾಯಿ ಉಪಟಳ ಪ್ರಸ್ತಾಪ: ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ವಿಧಾನ ಪರಿಷತ್ನಲ್ಲಿ ಬೆಂಗಳೂರಿನ ಬೀದಿ ನಾಯಿಗಳ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಶೂನ್ಯ ವೇಳೆಯಲ್ಲಿ ವಿಚಾರ ಮಂಡಿಸಿದ ಇವರು ಸಾಕಷ್ಟು ನಾಗರಿಕರು ನಗರದ ಬೀದಿ ನಾಯಿಗಳ ಕಡಿತ ಹಾಗೂ ಅಟ್ಟಿಸಿಕೊಂಡು ಬರುವ ಸಮಸ್ಯೆಯಿಂದ ಬೇಸತ್ತಿದ್ದಾರೆ. ಬೀದಿ ನಾಯಿಗಳ ಸಂತಾನ ಹರಣ ತಾರೀಕು ಸರ್ಕಾರ ಗಮನಹರಿಸುತ್ತಿಲ್ಲ.
ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಒಂದೂವರೆ ಲಕ್ಷ ಸಂಖ್ಯೆಯನ್ನು ಇದು ಮೀರಿದೆ ಎಂಬ ಆತಂಕ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಈ ವಿಚಾರವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ಉತ್ತರ ಒದಗಿಸುವ ಭರವಸೆ ನೀಡಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಬೆಂಗಳೂರು ನಗರದ ಮತದಾರರ ಚೀಟಿಯ ಅಕ್ರಮ ಮಾಹಿತಿ ಸಂಗ್ರಹದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುವಂತೆ ಕೇಳಿದ್ದ ಮನವಿಗೆ ಸ್ಪಂದಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಇದನ್ನು ನಿಯಮ 68ರ ಅಡಿ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಇಂದು ಬೆಳಗ್ಗೆ 9.15ಕ್ಕೆ ಜೆಡಿಎಸ್ ಹಾಗೂ 9.45ರ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಇದೊಂದೇ ವಿಚಾರವಾಗಿ ನಿರ್ವಹಿ ಸೂಚನೆ ಅಡಿ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.
ರಾಜ್ಯ ಬಿಜೆಪಿ ಸರ್ಕಾರ ಅಕ್ರಮವಾಗಿ ಮತದಾರರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಈ ಹಿನ್ನೆಲೆ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವ ಭರವಸೆ ನೀಡಿದರು. ಈ ವಿಚಾರ ಯಾವಾಗ ಚರ್ಚೆಗೆ ಕೊಡಲಿದ್ದೀರಿ ಎಂದು ಪ್ರತಿಪಕ್ಷದ ನಾಯಕರು ಸಭಾಪತಿಗಳಿಗೆ ಒತ್ತಾಯಿಸಿ ಕೇಳಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಇತರೆ ಸದಸ್ಯರು ಪಟ್ಟು ಹಿಡಿದು ಕುಳಿತರು.
ರಾಜ್ಯ ಸರ್ಕಾರದ ಅಕ್ರಮ ಹೆಚ್ಚಾಗಿದೆ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುವುದು ಸರಿಯಲ್ಲ ಈ ಹಿನ್ನಲೆ ಸುಧೀರ್ಘ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಈ ಅಕ್ರಮದ ಹಿನ್ನೆಲೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವಜಾಗೊಳಿಸಿ ತನಿಖೆ ನಡೆಸಲಾಗುತ್ತಿದೆ. ನಾಳೆ ದಿನವಿಡೀ ಈ ವಿಚಾರದ ಚರ್ಚೆಗೆ ಸಮಯ ಮೀಸಲಿಡಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು ಈ ವಿಚಾರವನ್ನು ನಾಳೆ ಬೆಳಿಗ್ಗೆ ನಿಯಮ 68ರ ಅಡಿ ಚರ್ಚೆಗೆ ತೆಗೆದುಕೊಳ್ಳುವ ಭರವಸೆ ನೀಡಿದರು. ಆದರೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ನಿಯಮ 59ರ ಅಡಿ ಈ ಚರ್ಚೆಗೆ ಅವಕಾಶ ನೀಡಬೇಕು. ಹೆಚ್ಚಿನ ಸದಸ್ಯರು ಈ ವಿಚಾರವಾಗಿ ಮಾತನಾಡಬೇಕಿದೆ ಎಂದರು.
ಸಭಾ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸಹ ಮಾತನಾಡಿ, ನಾವು ಸಹ ಚರ್ಚೆಗೆ ಸಿದ್ಧವಿದ್ದು, ಸಭಾಪತಿಗಳು ಯಾವುದೇ ರೀತಿಯಲ್ಲಿ ಅವಕಾಶ ನೀಡಿದರೂ ಮಹತ್ವದ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿದ್ಧ ಎಂದರು. ಜೆಡಿಎಸ್ ಸದಸ್ಯ ಭೋಜೆಗೌಡ ಮಾತನಾಡಿ, ಸಾಕಷ್ಟು ಅಧಿಕಾರಿಗಳು ಈ ಪ್ರಕರಣದಲ್ಲಿ ವಜಾ ಆಗಿದ್ದಾರೆ. ಸರ್ಕಾರವೇ ಇದರಲ್ಲಿ ನೇರವಾಗಿ ಭಾಗಿಯಾಗಿದೆ. ಈ ಹಿನ್ನೆಲೆ ಈ ಕುರಿತು ವಿಸ್ತೃತ ಚರ್ಚೆ ನಡೆಯಲೇಬೇಕು ಎಂದು ಒತ್ತಾಯಿಸಿದರು.
ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಭಾಪತಿಗಳು ಚರ್ಚೆಯ ಅಗತ್ಯದ ಮನವರಿಕೆ ತಮಗಿದ್ದು, ನಾಳೆ ಬೆಳಗ್ಗೆ ನಿಯಮ 68ರ ಅಡಿ ಚರ್ಚೆಗೆ ಕಾಲಾವಕಾಶ ನೀಡುವುದಾಗಿ ತಿಳಿಸಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ಸಮಸ್ಯೆ.. ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಗದ್ದಲ, ವಾಕ್ಸಮರ