ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪೀರನವಾಡಿಯಲ್ಲಿ ನಿರ್ಮಿಸಲಾಗುತ್ತಿರುವ ಗಾಂಧಿ ಭವನ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ಗಾಂಧೀಜಿಯವರ 150ನೇ ಜನ್ಮದಿನದಂದೇ ಭೂಮಿ ಪೂಜೆ ನೆರವೇರಿಸಿದ ಶಾಸಕರು, ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಭವನ ನಿರ್ಮಾಣಕ್ಕೆ ಒಟ್ಟಾರೆ 3 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಈಗಾಗಲೇ 2.87 ಕೋಟಿ ರೂಪಾಯಿ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.
ಪೀರನವಾಡಿಯಲ್ಲಿ ಜೈನ್ ಕಾಲೇಜು ಎದುರಿಗೆ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ 2 ಎಕರೆ ಜಮೀನು ಮಂಜೂರು ಮಾಡಿದೆ.
ಪೀರನವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಕೇಶ್ ತಳವಾರ, ಭೂಷಣ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರ ಗೌಡ ಪಾಟೀಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.