ಅಥಣಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಇಂದು ಮುಂಜಾನೆ ದಿಢೀರ್ ಜಿಲ್ಲೆಯ ಅಥಣಿ ಪಟ್ಟಣದಲ್ಲಿನ ತಹಸೀಲ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಹಾಜರಾತಿ ಹಾಗೂ ಕಾರ್ಯಕ್ಷಮತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ 17 ಜನ ಅಧಿಕಾರಿಗಳು ಗೈರು ಹಾಜರಾಗಿರುವುದು ಕಂಡುಬಂದಿದ್ದು, ಅವರ ಹಾಜರಾತಿ ಸ್ಥಳದಲ್ಲಿ ಗೈರುಹಾಜರು ಎಂದು ನಮೂದಿಸಿ ಸೀಲ್ಹಾಕಿ ಸೂಚನೆ ನೀಡಿದ ಅವರು, ಗೈರಾದವರ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಿದ್ದಾರೆ.
ಇಂದು ಮುಂಜಾನೆ 10:45 ಗಂಟೆಯಾದರೂ ಅಧಿಕಾರಿಗಳು ಆಗಮಿಸದೇ ಇದ್ದದ್ದು ಉಪ ಮುಖ್ಯಮಂತ್ರಿಗಳ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯುಂಟಾಗುತ್ತದೆ, ಮುಂದಿನ ದಿನದಲ್ಲಿ ಹಲವಾರು ಕಾರ್ಯ ಕಚೇರಿಗಳಿಗೆ ಧಿಡೀರ್ ಭೇಟಿ ನೀಡುವ ಮೂಲಕ ಚುರುಕು ಮುಟ್ಟಿಸಲಾಗುವುದು ಎಂದರು.