ಚಿಕ್ಕೋಡಿ: ''ಬಿಜೆಪಿಯಿಂದ ನಾವು ಯಾರೂ ಆಪರೇಷನ್ ಕಮಲ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಳಗೊಳಗೇ ಭಿನ್ನಮತ ಸ್ಪೋಟಗೊಂಡು ಸರ್ಕಾರವನ್ನು ಉರಳಿಸಿದರೂ ಉರುಳಿಸಬಹುದು'' ಎಂದು ಸಂಸದ ಅಣ್ಣಾಸಾಬ್ ಜೊಲ್ಲೆ ಭವಿಷ್ಯ ನುಡಿದರು.
ನಗರದಲ್ಲಿಂದು 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ಸಚಿವರು, ಶಾಸಕರು ಯಾರ ಮಾತನ್ನೂ ಕೇಳುತ್ತಿಲ್ಲ. ಕ್ಷೇತ್ರಗಳಿಗೆ ಅನುದಾನ ಕೊರತೆಯಿಂದ ಶಾಸಕರು-ಸಚಿವರ ನಡುವೆ ವೈಮನಸ್ಸು ಉಂಟಾಗಿದ್ದು, ಸರ್ಕಾರ ಬಿದ್ರೂ ಬೀಳಬಹುದು'' ಎಂದರು.
ಲಕ್ಷ್ಮಣ ಸವದಿ ಪೆನ್‌ಡ್ರೈವ್ ವಿಚಾರ: ''ಲಕ್ಷ್ಮಣ ಸವದಿ ಅವರು ನನ್ನ ಬಳಿಯು ಪೆನ್‌ಡ್ರೈವ್ ಇದೆ ಎಂದು ಹೇಳಿದರೆ ನಂಬಲು ಸಾಧ್ಯವೇ. ಅವರು ಕಾಮಿಡಿ ಮಾಡುತ್ತಿದ್ದಾರೆ. ಅವರ ಬಳಿ ಪೆನ್‌ಡ್ರೈವ್ ಇರೋಕೆ ಸಾಧ್ಯವೇ ಇಲ್ಲ'' ಎಂದು ಪ್ರತಿಕ್ರಿಯಿಸಿದರು.
ನಿಪ್ಪಾಣಿ ನಗರಸಭೆ ಮೇಲೆ ಭಗವಾಧ್ವಜ ಹಾರಿಸುವ ಯತ್ನ: "ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ, ನಾನು ಅಲ್ಲಿಗೆ ಹೋಗಿಲ್ಲ. ಏನಾದರೂ ತಪ್ಪಾಗಿದ್ರೆ, ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದರು.
ಮಗನಿಂದ ಒಳ್ಳೆಯ ಸ್ಥಾನ ಸಿಕ್ಕಿದೆ- ಹುಕ್ಕೇರಿ: ''ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ. ನನಗೆ ಸಚಿವ ಸ್ಥಾನಮಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಆದರೆ, ನನ್ನ ಮಗ ಗಣೇಶ ಹುಕ್ಕೇರಿಗೆ ಒಳ್ಳೆಯ ಸ್ಥಾನಮಾನ ಸಿಕ್ಕಿದೆ'' ಎಂದು ಎಂಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿಂದು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಬಳಿಕ, ಮಾಧ್ಯಮದ ಜೊತೆ ಮಾತನಾಡಿದ ಅವರು, ''ನನ್ನ ಮಗನಿಗೆ ಒಳ್ಳೆಯ ಸ್ಥಾನ ಸಿಕ್ಕಿದೆ. ಮುಖ್ಯಮಂತ್ರಿ ಹಾಗೂ ದೆಹಲಿ ನಾಯಕರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಯಾವುದೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ. 8 ಬಾರಿ ಆಯ್ಕೆಯಾಗಿದ್ದೇನೆ, ಯಾವಾಗಲೂ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ಈಗಲೂ ಇದೊಂದು ವಿಶೇಷ ಪ್ರಕರಣ ಅಂತ ಭಾವಿಸಿದ್ದೇನೆ'' ಎಂದು ಅಭಿಪ್ರಾಯಿಸಿದರು.
''ತಂದೆಯಾದವ ಮಗನಿಗೆ ಅಧಿಕಾರ ನೀಡುವ ವ್ಯವಸ್ಥೆ ಇದೆ. ಆದ್ರೆ, ಇವತ್ತು ಮಗ ತಂದೆಗೆ ಅಧಿಕಾರ ನೀಡಿದ್ದಾರೆ. ಮಗನಿಂದಲೇ ಈ ಅಧಿಕಾರ ಸಿಕ್ಕಿದೆ. ಗಣೇಶ ಹುಕ್ಕೇರಿ ದೆಹಲಿ ನಾಯಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಭೇಟಿ ಮಾಡಿ, ತನ್ನ ಬದಲಾಗಿ ನನ್ನ ತಂದೆಗೆ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದಾರೆ. ಅದರ ಫಲವಾಗಿ ಇವತ್ತು ಸ್ಥಾನಮಾನ ಸಿಕ್ಕಿದೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ'' ಎಂದು ಭರವಸೆ ನೀಡಿದರು.
ಇದನ್ನೂ ಓದಿ: Santhosh Lad: ನಮ್ಮ ಸರ್ಕಾರ 5 ವರ್ಷ ನಡೆಯುತ್ತದೆ- ಸಂತೋಷ್ ಲಾಡ್