ಬೆಳಗಾವಿ: ತೈಲ ಉತ್ಪನ್ನಗಳ ಬೆಲೆ ಇಳಿಕೆ ಮಾಡುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗಾವಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಏರುತ್ತಿರುವ ಕಾರಣ ಮಧ್ಯಮ ಹಾಗೂ ಬಡವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಜನರಿಗೆ ತೈಲ ಬೆಲೆ ಹೆಚ್ಚಿಸುವ ಮೂಲಕ ಮತ್ತೆ ಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ದಿನಸಿ ವಸ್ತುಗಳ ಬೆಲೆ ಏರಿಕೆಯೂ ಆಗುತ್ತಿದೆ. ಜಾಗತಿಕ ಮಟ್ಟದಲ್ಲಿ ಬೆಲೆ ಕುಸಿತಗೊಂಡಿದ್ದರೂ ದೇಶದಲ್ಲಿ ತೈಲ ಬೆಲೆ ಏರಿಸಲಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.