ಬೆಳಗಾವಿ: ಸದ್ಯ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟ ಸಚಿವರು ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾನೂನು ಮತ್ತು ಇತರೆ ಕಾಯ್ದೆಗಳನ್ನು ಪರಿಶೀಲಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ಈ ನಿಲುವನ್ನು ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ಸಹ ಹಮ್ಮಿಕೊಂಡಿದೆ. ಈ ಮಧ್ಯೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾನು ಮಹಿಳೆಯಾಗಿ ಹೇಳುತ್ತೇನೆ. ಗೋಹತ್ಯೆ ನಿಷೇಧ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನು ನಾನು ಸಹಿಸಲ್ಲ ಎಂದು ಹೇಳಿದ್ದಾರೆ.
ಇನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಧನ ಹೆಚ್ಚಿಸುವ ಕುರಿತು ಪ್ರತಿಕ್ರಿಯಿಸಿ, ಇದು ನಮ್ಮ ಪ್ರಣಾಳಿಕೆಯಲ್ಲಿ ಇತ್ತು. ಇದರ ಬಗ್ಗೆ ಖಂಡಿತವಾಗಿ ಚರ್ಚೆ ಮಾಡುತ್ತೇವೆ. ಅಧಿಕಾರಿಗಳ ಜೊತೆಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತದೆ. ಅಂಗನವಾಡಿ ಸಹಾಯಕಿಯರುಗೆ ಸಹಾಯ ಧನ ಹೆಚ್ಚಿಗೆ ಮಾಡುವ ಕುರಿತು ಚರ್ಚಿಸುತ್ತೇವೆ ಎಂದರು.
ಜೂನ್ 11ರಿಂದ ಉಚಿತ ಬಸ್, ಆಗಸ್ಟ್ 15ಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬರಲಿವೆ. ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಗ್ಯಾರಂಟಿ ಕೂಡ ಬರಲಿವೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ. ಕಾಂಗ್ರೆಸ್ ನೀಡಿದ ಐದು ಭರವಸೆ ಶೀಘ್ರವೇ ಅನುಷ್ಠಾನಕ್ಕೆ ಬರುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿಯವರ ಟೀಕೆ ಮತ್ತು ಪ್ರತಿಭಟನೆಗೆ ನಾನೇನೂ ಉತ್ತರ ಕೊಡಲು ಸಾಧ್ಯವಿಲ್ಲ. ಅವರೂ ಸರ್ಕಾರ ನಡೆಸಿದ್ದಾರೆ, ಅವರು ಎಷ್ಟು ಭರವಸೆ ನೀಡಿದ್ರು, ಅದರಲ್ಲಿ ಎಷ್ಟು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ ಹೆಬ್ಬಾಳ್ಕರ್, ಅವರಿಗೆ ಚುನಾವಣೆಯಲ್ಲಿ ಜನ ಉತ್ತರ ಕೊಟ್ಟು ಸರಿಯಾದ ಪಾಠ ಕಲಿಸಿದ್ದಾರೆ. ಆದರೆ, ನಾವು ಕೊಟ್ಟಂತಹ ಭರವಸೆ ಖಂಡಿತವಾಗಿ ಈಡೇರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆಯ್ಕೆ ಬಗ್ಗೆ ಜುಲೈ 1 ರಿಂದ 15ರ ವರೆಗೆ ಅರ್ಜಿ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಮೂರ್ನಾಲ್ಕು ಇಲಾಖೆಗಳ ಜೊತೆ ನಾವು ಕೆಲಸ ಮಾಡಬೇಕಾಗುತ್ತೆ. ಬರೀ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇದು ಆಗಲ್ಲ. ನಮ್ಮ ಇಲಾಖೆ ಸಿಬ್ಬಂದಿ ಜೊತೆ ಕಂದಾಯ ಇಲಾಖೆ, ಆರ್‌ಡಿಪಿಆರ್, ನಗರಾಭಿವೃದ್ಧಿ ಇಲಾಖೆ ಒಳಗೊಂಡು ಗೃಹಲಕ್ಷ್ಮೀ ಯೋಜನೆ ಜಾರಿ ತರಬೇಕಾಗುತ್ತದೆ. ಅವರ ಬ್ಯಾಂಕ್ ಖಾತೆ ನಂಬರ್, ಆಧಾರ್ ಲಿಂಕ್ ಮಾಡೋದಾಗಲಿ, ಕುಟುಂಬದ ಮುಖ್ಯಸ್ಥೆ ಯಾರು ಎಂಬುದನ್ನು ಅವರು ಆಯ್ಕೆ ಮಾಡಿಕೊಡಬೇಕು. ಇದೆಲ್ಲ ನೋಡಿಕೊಂಡು ನಾವು ಹಾರ್ಡ್ ಕಾಪಿ ಫಾರ್ಮ್ ಕೊಡ್ತೀವಿ, ಜೊತೆಗೆ ಸಾಫ್ಟ್‌ವೇರ್ ಮಾಡುತ್ತಿದ್ದೇವೆ. ಫಲಾನುಭವಿಗಳು ತಮ್ಮ ಅರ್ಜಿ ಅಪ್‌ಲೋಡ್ ಮಾಡಬಹುದು. ಎಲ್ಲ ರೀತಿಯಾದ ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಸಚಿವೆ ಭರವಸೆ ನೀಡಿದರು.
ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗುವ ಆತಂಕ ವಿಚಾರಕ್ಕೆ ಇನ್ನು ಅಧಿಕಾರಿಗಳು, ಮಂತ್ರಿಗಳ ಹಂತದಲ್ಲಿ ಎಲ್ಲಾ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತೆ ಕಂತೆಗಳಿಗೆ ದಯಮಾಡಿ ಯಾರೂ ಕಿವಿಗೊಡಬೇಡಿ. ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿದ ನಿಮಗೆ ಭರವಸೆಯ ಆಶಾಕಿರಣ ಮೂಡಿಸಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆ ಈಡೇರಿಸುತ್ತೆ. ಬಾಡಿಗೆದಾರರು ಇರಬಹುದು, ಮನೆ ಮಾಲೀಕರು ಇರಬಹುದು ಯಾರಿಗೂ ಆತಂಕ ಬೇಡ ಯೋಜನೆ ಜಾರಿ ತರುತ್ತೇವೆ ಎಂದರು.
ಮನೆ ಮಾಲೀಕರು ಹಾಗೂ ಬಾಡಿಗೆದಾರರು ಒಂದೇ ಆರ್‌ಆರ್ ನಂಬರ್ ಹೊಂದಿದ್ರೆ ಹೇಗೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಬಗ್ಗೆ ಜಾಸ್ತಿ ಬೆಳಕನ್ನು ಚೆಲ್ಲುತ್ತಾರೆ. ಗೃಹಲಕ್ಷ್ಮೀ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ನಾನು ಮಾತನಾಡುತ್ತೇನೆ. ತಾವು ಈ ವಿಷಯ ನನ್ನ ಗಮನಕ್ಕೆ ತಂದಿದ್ದು ಅವರ ಜೊತೆ ಚರ್ಚೆ ಮಾಡುವೆ ಎಂದರು.
ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು.. ಬೆಳಗಾವಿ ಜಿಲ್ಲಾ ವಿಭಜನೆಯ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾ ವಿಭಜನೆ ಆಗಬೇಕು. ಅದು ಎಲ್ಲರ ಸಹಮತದಿಂದ ಆಗಬೇಕು. ಇದರಲ್ಲಿ ಬರೀ ಲಕ್ಷ್ಮೀ ಹೆಬ್ಬಾಳ್ಕರ್, ಪ್ರಕಾಶ ಹುಕ್ಕೇರಿ, ಸತೀಶ ಜಾರಕಿಹೊಳಿ ಅವರ ಹೇಳಿಕೆಗಳು ಅಪ್ರಸ್ತುತ. ನಮ್ಮ ಜಿಲ್ಲೆಯ ಅಭಿವೃದ್ಧಿ ಆಗಬೇಕೆಂದು ಎಲ್ಲರ ಮನಸ್ಸಿನಲ್ಲಿ ಬಂದಿದೆ. ಹೀಗಾಗಿ ಜಿಲ್ಲೆ ವಿಭಜನೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಹಂತ ಹಂತವಾಗಿ ಚರ್ಚಿಸಿ, ಅಭಿವೃದ್ಧಿ ಪರವಾದ ನಿಲುವನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.
ಇದನ್ನೂ ಓದಿ: 13 ಮಂದಿ ಸಂಸದರ ತೇಜೋವಧೆಗೆ ಯತ್ನ: ಹೈಕಮಾಂಡ್ ಮಧ್ಯಪ್ರವೇಶಕ್ಕೆ ಡಿವಿಎಸ್ ಆಗ್ರಹ