ಅಥಣಿ(ಬೆಳಗಾವಿ): ಶ್ರೇಷ್ಠ ರಾಜಕೀಯ ನಾಯಕರ ಹೆಸರುಗಳನ್ನು, ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದು ಶೋಭೆ ತರುವ ವಿಷಯವಲ್ಲ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಮುಖಾಂತರ ಅಥಣಿ ತಾಲೂಕಿನ ಕೋಕಟನೂರಿನಿಂದ ಐಗಳಿ ಗ್ರಾಮದವರೆಗಿನ ಸರಿ ಸುಮಾರು 9 ಕೋಟಿ ರೂಪಾಯಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಇತ್ತೀಚೆಗೆ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯುತ್ತೀರಾ? ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸವದಿ ಅವರು, ಯಾರೇ ಶ್ರೇಷ್ಠ ರಾಜಕೀಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು, ಅವರ ಹೆಸರುಗಳಿಗೆ ಮಸಿ ಬಳಿಯುವುದು ಸರಿಯಲ್ಲ. ನಮ್ಮ ರಾಜಕೀಯ ಹಿತಾಸಕ್ತಿಗಾಗಿ ಅವರುಗಳ ಹೆಸರು ಪ್ರಸ್ತಾಪ ಮಾಡುವುದು ಉತ್ತಮವಲ್ಲ ಎಂದು ಸಲಹೆ ನೀಡಿದರು.
2019 ಮತ್ತು 2021ರ ಕೃಷ್ಣಾ ನದಿ ಪ್ರವಾಹ ನೆರೆ ಸಂತ್ರಸ್ತರನ್ನು ಗುರುತಿಸಿರುವ ಸರ್ಕಾರ ಸೂಕ್ತವಾದ ಬೆಳೆ ಹಾಗೂ ಮನೆ ಪರಿಹಾರ ವಿತರಣೆ ಮಾಡುತ್ತಿದೆ. ಈಗಾಗಲೇ ಸರ್ವೆ ಕಾರ್ಯ ಕೂಡಾ ಪ್ರಾರಂಭವಾಗಿದೆ. ಶಾಶ್ವತ ಪರಿಹಾರಕ್ಕೆ ಸರ್ಕಾರ ಈಗಾಗಲೇ ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.
ವಿದ್ಯಾಭ್ಯಾಸ ಮಾಡಬಹುದು: ಅಥಣಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕುಡಿಯುವ ನೀರು, ಸುಗಮ ಸಂಚಾರ ಹಾಗೂ ನೀರಾವರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕೋಕಟನೂರ ಪಶು ಮಹಾವಿದ್ಯಾಲಯ ಕಾಲೇಜು ಉದ್ಘಾಟನೆ ನೆರವೇರಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಭಾಗದ ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡಬಹುದೆಂದು ಹೇಳಿದರು.
ಕಾಮಗಾರಿ ಪ್ರಾರಂಭವಾಗುತ್ತದೆ: ವಿಜಯಪುರದಿಂದ ಮುರಗುಂಡಿವರೆಗೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟು ಮಾಡಲಾಗುವುದು. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 450 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ. ಸದ್ಯದಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಓದಿ: ಸ್ವಾತಂತ್ರ್ಯೋತ್ಸವ ರಥವನ್ನು ಎಸ್ಡಿಪಿಐ ಕಾರ್ಯಕರ್ತರು ತಡೆದಿರುವುದು ದುರದೃಷ್ಟಕರ: ಯು ಟಿ ಖಾದರ್