ಗೋಕಾಕ್: ಕ್ಷೇತ್ರದಲ್ಲಿ ಇನ್ಮುಂದೆ ಮಾವ ಅಳಿಯನ ಆಟ ನಡೆಯುವುದಿಲ್ಲ. ಅವರ ಮಾತು ಕೇಳದೇ ತಾವು ಧೈರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬಹುಮತದಿಂದ ಆರಿಸಿ ತರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತದಾರರಿಗೆ ಮನವಿ ಮಾಡಿದರು.
ಪ್ರಚಾರ ಪ್ರಾರಂಭಿಸಿ ತಾಲೂಕಿನ ಶಿಂದಿಕುರಬೇಟ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿದ ಸಂದರ್ಭದಲ್ಲಿ ಎರಡು ದಿನ ಮುಂಚಿತವಾಗಿ ನಾವೆಲ್ಲ ಒಂದೇ ಅಂತಾ ಹೇಳುತ್ತಾರೆ. ಅವರ ಮಾತಿಗೆ ತಲೆ ಕಡಿಸಿಕೊಳ್ಳಬಾರದು. ನಮ್ಮದು ಭ್ರಷ್ಟಚಾರದ ವಿರುದ್ಧ, ಅಭಿವೃದ್ದಿ ಪರ ಹೋರಾಟವಾಗಿದೆ. ನಾನು ರಮೇಶ ಪರವಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದ್ದು ನನ್ನನೇ ಮರೆತಿದ್ದಾರೆ. ನೀವು ಯಾವ ಲೆಕ್ಕ. ಅಲ್ಲದೇ ನನಗೆ ಕಾಂಗ್ರೆಸ್ನಿಂದ ಟಿಕೆಟ್ ತಪ್ಪಿಸಲು ರಮೇಶನ ಕೈವಾಡ ಇತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೇನೆ ತಾವು ನನಗೆ ಮತ ನೀಡಬೇಕು ಎಂದರು.
ಹಳೆಯ ಅಂಗಡಿ ಬಂದ್ ಮಾಡಿ ಹೊಸ ಅಂಗಡಿ ತೆರೆದಿದ್ದು ತಾವುಗಳು ವಿಚಾರ ಮಾಡಿ ಮತ ನೀಡಬೇಕು. ಚುನಾವಣೆ ಇದ್ದಾಗ ಮಾತ್ರ ಬಾ ಅಂತಾ ಹೇಳುತ್ತಾರೆ. ಚುನಾವಣೆ ಮುಗಿದ ನಂತರ ನಾಳೆ ಬಾ ಅಂತಾ ಅಂತಾರೆ. ಮಾವ ಅಳಿಯ ಮತ್ತು ಅವರ ಜೊತೆಯಲ್ಲಿರುವವರು ನಾವೆಲ್ಲಾ ಒಂದೇ ಅಂತಾರೆ, ಅವರ ಮಾತು ಕೇಳಬೇಡಿ ಎಂದರು.