ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದು ಮರಾಠಿಗರ ಹಕ್ಕು ಎಂದು ಬಹಿರಂಗ ಸಮಾವೇಶದಲ್ಲಿ ಹೇಳಿಕೆ ನೀಡಿ ಕನ್ನಡಿಗರು ಮುಜುಗರ ಅನುಭವಿಸುವಂತೆ ಮಾಡಿದ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಸಾಹಿತ್ಯ ಭವನದಲ್ಲಿ ಸಮಾವೇಶ ನಡೆಸಿದ ಕಾರ್ಯಕರ್ತರು, ಬಳಿಕ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಮೇಶ್ ಜಾರಕಿಹೊಳಿ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಶಾಸಕ ರಮೇಶ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮ ಜರುಗಿಸುವಂತೆ ಆಗ್ರಹಿಸಿದ್ರು.
ಚೆನ್ನಮ್ಮ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚುವ ಮೂಲಕ ಸಾಹುಕಾರ್ ವಿರುದ್ಧ ಆಕ್ರೋಶ ಹೊರಹಾಕಿದರು. ಗ್ರಾಮೀಣ ಕ್ಷೇತ್ರ ಮರಾಠಿಗರ ಹಕ್ಕು ಎಂಬ ಹೇಳಿಕೆಯನ್ನು ರಮೇಶ್ ಹಿಂಪಡೆಯಬೇಕು ಹಾಗೂ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.