ಚಿಕ್ಕೋಡಿ (ಬೆಳಗಾವಿ): ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರದ ಜೊತೆಗೆ ಜನರೂ ಪ್ರವಾಹದಿಂದ ಎಚ್ಚೆತ್ತುಕೊಂಡಿದ್ದು, ಮುನ್ನೆಚ್ಚರಿಕೆಯಾಗಿ ಗ್ರಾಮಗಳನ್ನು ಬಿಡಲು ತಯಾರಿ ನಡೆಸುತ್ತಿದ್ದಾರೆ. ಕಳೆದ ವರ್ಷ ಮುನ್ನೆಚ್ಚರಿಕೆ ವಹಿಸದೇ ಇದ್ದ ಕಾರಣ ಪ್ರವಾಹದಿಂದಾಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದರು. ಅದೆಷ್ಟೋ ಜಾನುವಾರುಗಳು ಪ್ರವಾಹದ ನೀರಲ್ಲಿ ಕೊಚ್ಚಿ ಹೋಗಿದ್ದವು.
ಈಗ ಸರ್ಕಾರ ಹಾಗೂ ಅಧಿಕಾರಿಗಳು ಸ್ವಲ್ಪಸುಧಾರಿಸಿಕೊಂಡಿದ್ದಾರೆ. ಈಗಿನಿಂದಲೇ ಕೃಷ್ಣಾ ತೀರದಲ್ಲಿ ಅಲರ್ಟ್ ಮಾಡಲಾಗುತ್ತಿದೆ. ಈಗಾಗಲೇ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಮೂವತ್ತಕ್ಕೂ ಹೆಚ್ಚು ಎನ್‌ಡಿಆರ್‌ಎಫ್ ತಂಡ ಬೀಡು ಬಿಟ್ಟಿದ್ದು, ನದಿ ತೀರದ ಗ್ರಾಮಗಳಲ್ಲಿ ಈಗಾಗಲೇ ಮುನ್ನೆಚ್ಚರಿಕೆ ವಹಿಸಿದೆ.
ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಜೀವನಾಡಿ ಎಂದು ಕರೆಸಿಕೊಳ್ಳುವ ಕೃಷ್ಣ ನದಿಯಲ್ಲಿ ಈಗ ಪ್ರವಾಹದ ಆತಂಕ ಮನೆ ಮಾಡಿದೆ. ಹೋದ ವರ್ಷ ಕೃಷ್ಣಾ ನದಿ ಕೊಟ್ಟ ಏಟಿನಿಂದ ಅದೆಷ್ಟೋ ಜನರಿಗೆ ಇನ್ನು ಸುಧಾರಿಸಿಕೊಳ್ಳಲು ಆಗ್ತಿಲ್ಲ. ಮನೆ ಮಠ ಕಳೆದುಕೊಂಡ ಜನ ಇನ್ನೂ ಸಹ ಸೂರು ನಿರ್ಮಿಸಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದಾರೆ. ಆದರೆ, ಈಗ ಕೃಷ್ಣೆಯಲ್ಲಿ ಮತ್ತೆ ಪ್ರವಾಹದ ಆತಂಕ ಮನೆ ಮಾಡಿದ್ದು, ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಸಿದ್ದರಾಗಿ ಎಂಬ ಎಚ್ಚರಿಕೆಯನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ತಾಲೂಕು ಅಡಳಿತಗಳು ನೀಡಿವೆ.
ಈಗಾಗಲೇ ನದಿ ತೀರದ ಗ್ರಾಮಗಳಿಗೆ ಹಾಗೂ ಮುಳುಗಡೆ ಹೊಂದುವ ಗ್ರಾಮಗಳಲ್ಲಿ ಡಂಗೂರ ಸಾರಿ ಅಧಿಕಾರಿಗಳು ಜನರನ್ನ ಅಲರ್ಟ್ ಮಾಡುತ್ತಿದ್ದಾರೆ. ಪ್ರತಿ ವರ್ಷ 2 ಲಕ್ಷ ಕ್ಯೂಸೆಕ್ ಒಳಹರಿವು ದಾಟಿದ ನಂತರ ಎಚ್ಚರವಾಗುತ್ತಿದ್ದ ಜಿಲ್ಲಾಡಳಿತ ಈಗ ಕೇವಲ 69 ಸಾವಿರ ಕ್ಯೂಸೆಕ್ ನೀರಿಗೆ ಡಂಗುರ ಸಾರುತ್ತಿದೆ.
ಪ್ರತಿ ವರ್ಷದ ಪದ್ದತಿಯಂತೆ ಎರಡು ಲಕ್ಷ ಕ್ಯೂಸೆಕ್ ನೀರು ಬರುವವರೆಗೂ ಸುಮ್ಮನೆ ಇದ್ದು ನಂತರ ಜನರನ್ನು ರಕ್ಷಿಸೋಕೆ ಬರ್ತಿದ್ದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ವರ್ಷ ಬೇಗ ಎಚ್ಚೆತ್ತುಕೊಂಡಿರುವುದು ನಿಜಕ್ಕೂ ಮೆಚ್ಚುವ ವಿಷಯ. ಆದರೆ, ಇದು ಮಾತಿಗಷ್ಟೇ ಆಗದೆ ಜಾರಿಗೆ ಬಂದರೆ ಜನಕ್ಕೆ ಇನ್ನೂ ಅನುಕೂಲ.