ಬೆಳಗಾವಿ: ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದ ಶಿವಲಿಂಗ ಪಾಟೀಲ್ ಬಂಧಿತ ಆರೋಪಿ. ಶಿವಲಿಂಗ ಪಾಟೀಲ್ ಬೆಳಗಾವಿಯಲ್ಲಿ ಜ್ಞಾನದೀಪ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆ ಈತ ಕೋಚಿಂಗ್ ಸೆಂಟರ್ ಮುಚ್ಚಿದ್ದ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶಿವಲಿಂಗ ಪಾಟೀಲ್ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೆಪಿಎಸ್‌ಸಿಯ ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಈತನ ವಿರುದ್ಧ ಕೇಳಿಬಂದಿದೆ.
ಬೆಂಗಳೂರು ಸಿಸಿಬಿ ಪೊಲೀಸರು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶಿವಲಿಂಗ ಪಾಟೀಲ್‌ನನ್ನು ಬಂಧಿಸಲಾಗಿದೆ. ಪಾಟೀಲ್‌ನನ್ನು ಬೆಳಗಾವಿ ಪೊಲೀಸರು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ:ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ
ಪ್ರಕರಣದಲ್ಲಿ ಈ ಹಿಂದೆ ಕೆಪಿಎಸ್‌ಸಿಯ ಮೂವರು ನೌಕರರು ಸೇರಿದಂತೆ 19 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.