ಬೆಳಗಾವಿ: ದೇಶದ ಎಲ್ಲ ಕ್ಷೇತ್ರಗಳಲ್ಲೂ ಜಾತಿ, ಧರ್ಮ, ದುಡ್ಡು ಕಾಲಿಟ್ಟಿದೆ ಹೀಗಾಗಿ ಇಂದಿನ ದಿನಗಳಲ್ಲಿ ಪ್ರಾಮಾಣಿಕರನ್ನು ಪತ್ತೆ ಹಚ್ಚುವುದು ಕಷ್ಟ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮಮಂದಿರಕ್ಕೆ ಕಾಂಗ್ರೆಸ್ ಪಕ್ಷ ದೇಣಿಗೆ ನೀಡದಿದ್ರೆ ಮುಸ್ಲಿಮರ ಓಲೈಕೆ ಮಾಡಲಾಗುತ್ತಿದೆ ಅಂತಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದವರು ಸೇರಿದಂತೆ ಬೇರೆ ಬೇರೆ ಪಕ್ಷದ ಸಾಕಷ್ಟು ಜನರು ದೇಣಿಗೆ ನೀಡಿದ್ದಾರೆ. ಕೊಡುವವರು ಕೊಟ್ಟೆ ಕೊಡ್ತಾರೆ ಎಂದರು.
ಶ್ರೀ ರಾಮಮಂದಿರ ಬಿಜೆಪಿ ಪಕ್ಷದ ಆಸ್ತಿಯಲ್ಲ. ಅದೊಂದು ಭಾವನೆ ಆಗಿದ್ದು, ರಾಮಮಂದಿರ ದೇಣಿಗೆ ಹಣಕ್ಕೆ ದುರುಪಯೋಗ ಆರೋಪದ ಬಗ್ಗೆ ಮಾಧ್ಯದವರು ಬೆಳಕು ಚೆಲ್ಲುವ ಕಾರ್ಯ ಮಾಡಬೇಕು. ಕಾಂಗ್ರೆಸ್ ನವರು ಏನಾದರೂ ಮಾಡಲು ಹೋದ್ರೆ ನಮ್ಮನ್ನೇ ಸಿಕ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಅಧಿಕಾರ ನಡೆಸುತ್ತಿರುವ ಆಡಳಿತ ಪಕ್ಷದ ವೈಫಲ್ಯ ಎತ್ತಿ ತೋರಿಸುವ ಬದಲು ಕಾಂಗ್ರೆಸ್ ಪಕ್ಷದ ತಪ್ಪನ್ನೇ ಹುಡುಕುತ್ತಾರೆ. ಹೀಗಾಗಿ ಕಾಂಗ್ರೆಸ್ ಸಣ್ಣ ತಪ್ಪು ಮಾಡಿದರೂ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಜಾತಿ, ಧರ್ಮ, ದುಡ್ಡು ಕಾಲಿಟ್ಟಿದೆ. ಹೀಗಾಗಿ ಪ್ರಾಮಾಣಿಕರನ್ನು ಗುರುತಿಸುವುದು ಬಹಳ ಕಷ್ಟವಾಗಿದೆ. ಕಾಂಗ್ರೆಸ್ ಪಕ್ಷವನ್ನಷ್ಟೇ ಜವಾಬ್ದಾರಿಯನ್ನಾಗಿ ಮಾಡದೇ ಎಲ್ಲರೂ ಹೊಣೆಗಾರಿಕೆ ಹೊತ್ತುಕೊಳ್ಳಬೇಕಿದೆ ಎಂದರು.
ಇದಲ್ಲದೇ ವಿವಿಧ ಸಮುದಾಯಗಳು ನಡೆಸುತ್ತಿರುವ ಮೀಸಲಾತಿ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟದ ಮೂಲಕ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೇ ಉದ್ಭವ ಆಗೊದಿಲ್ಲ. ಕಾನೂನಿನಲ್ಲೇನಿದೆ ಅದನ್ನು ಅಷ್ಟೇ ಮಾಡಬೇಕಾಗುತ್ತೆ. ಮೀಸಲಾತಿ ಕೇಳಲು ಹಕ್ಕಿದೆ. ಆದ್ರೆ, ಸರ್ಕಾರದಿಂದ ಎಲ್ಲರಿಗೂ ಮೀಸಲಾತಿ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೀಸಲಾತಿಗೆ ಅದರದ್ದೇ ಆದ ಮಾನದಂಡಗಳಿದ್ದು, ಯಾವ ಸಮುದಾಯಕ್ಕೆ ಅವಶ್ಯಕತೆ ಇದೆ. ಅವರಿಗೆ ಮೀಸಲಾತಿ ಸಿಗುತ್ತದೆ ಎಂದರು.