ಬೆಳಗಾವಿ: ಪೆಟ್ರೋಲ್ 100 ರೂ. ನಾಟೌಟ್ ಹೋರಾಟದ ಭಾಗವಾಗಿ ಗೋಕಾಕ್ನಲ್ಲಿ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ತೈಲ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ವೇಷಧಾರಿಯನ್ನು ಸತೀಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು.
ಮಹಿಳಾ ಕಾರ್ಯಕರ್ತರು ಮೋದಿ ವೇಷಧಾರಿಗೆ ಆರತಿ ಎತ್ತಿ ತಿಲಕ ಹಚ್ಚಿದರು. ತಾಂಬೂಲ ಕೂಡ ನೀಡಲಾಯಿತು. ಮೋದಿಗೆ ಜೈಕಾರ ಕೂಗಿ, ವ್ಯಂಗ್ಯ ಮಾಡಲಾಯಿತು. ಕಾರ್ಯಕರ್ತರು ಎತ್ತಿನ ಬಂಡಿ ಚಲಾಯಿಸುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿದರು.
ಪೆಟ್ರೋಲ್ ಬಂಕ್ನಲ್ಲಿ ಮೋದಿ ವೇಷಧಾರಿಯಿಂದ ವಾಹನಗಳಿಗೆ ಪೆಟ್ರೋಲ್ ತುಂಬಿಸಲಾಯಿತು. ಎಲ್ಲಿಗೆ ಬಂತು ಅಚ್ಛೇದಿನ್, ಪೆಟ್ರೋಲ್ ಸೆಂಚುರಿ ಬಾರ್ಸೋವರೆಗೂ ಬಂತು, ಮೋದಿ ವೈರಸ್ ಸೇರಿ ಇನ್ನಿತರೇ ಬರಹಗಳಿರುವ ಭಿತ್ತಿಪತ್ರಗಳನ್ನು ಹಿಡಿದು, ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಜನಸಾಮಾನ್ಯರು ಧ್ವನಿ ಎತ್ತಬೇಕು:
ನಂತರ ಮಾತನಾಡಿದ ಸತೀಶ ಜಾರಕಿಹೊಳಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕೇವಲ ವಾಹನ ಸವಾರರಿಗಷ್ಟೇ ಅಲ್ಲದೇ, ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷಗಳು ತೈಲ ಬೆಲೆ ವಿರೋಧಿಸಿ ಹೋರಾಟ ಮಾಡುತ್ತಿವೆ. ಇದು ಇಡೀ ದೇಶದ ಜನರ ಸಮಸ್ಯೆ ಆಗಿರುವುದರಿಂದ, ಜನರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಅಂದಾಗ ಮಾತ್ರ ಪ್ರತಿಭಟನೆ ಯಶಸ್ವಿಯಾಗಿ, ಸರ್ಕಾರಕ್ಕೆ ಬಿಸಿ ತಟ್ಟುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಇಡೀ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧೆಡೆಯೂ ಈಗಾಗಲೇ ಹೋರಾಟ ಮಾಡಲಾಗಿದೆ. ಇಂದು ತಾಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ನಾಳೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಅಥಣಿ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆ
ತಾಲೂಕಿನ ಪೆಟ್ರೋಲ್ ಬಂಕ್ಗಳ ಮುಂದೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ದ್ವಿಚಕ್ರ ವಾಹನಗಳನ್ನು ಮಲಗಿಸಿ ಅದರ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹಾಗೂ ಧರೇಪ್ಪ ಠಕ್ಕಣ್ಣವರ ಮಾತನಾಡಿ, ಒಂದು ಕಡೆ ಕೊರೊನಾ ಮತ್ತೊಂದೆಡೆ ತೈಲ ಬೆಲೆ, ದಿನಸಿ ಪದಾರ್ಥಗಳ ಏರಿಕೆಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿಕೆ ಕಂಡರೂ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಲೀಟರ್ಗೆ ನೂರರ ಗಡಿ ದಾಟಿದೆ. ತಕ್ಷಣವೇ ತೈಲ ಬೆಲೆಯನ್ನು ಇಳಿಸದೇ ಇದ್ದರೆ, ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.