ಚಿಕ್ಕೋಡಿ (ಬೆಳಗಾವಿ): ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಅವರು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕದ ಜನತೆಯ ಸಂಕಷ್ಟಗಳನ್ನು ಪರಿಹಾರ ಮಾಡುವುದೇ ಪ್ರಜಾಧ್ವನಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಬೆಳಗಾವಿಯ ಈ ಭಾಗದಿಂದ ನಾಂದಿ ಹಾಡಿದ್ದೇವೆ. ಭಾರತದ ಜನತೆ ಬೆಲೆ ಏರಿಕೆಯಿಂದ ನಲುಗಿ ಹೋಗಿದೆ. ಕರ್ನಾಟಕ ಜನತೆಯ ಕಷ್ಟ ಕಾರ್ಪಣ್ಯಗಳು ತೊಲಗಲಿ ಎಂದು ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದ ಅವರು, ವೇದಿಕೆಯ ಮೇಲೆಯೇ ಉಚಿತ ವಿದ್ಯುತ್ ಭಿತ್ತಿಚಿತ್ರಗಳನ್ನು ಕಾಂಗ್ರೆಸ್ ನಾಯಕರು ಪ್ರದರ್ಶನ ಮಾಡಿದರು.
ಪ್ರತೀ 200 ಯೂನಿಟ್ಗೆ 1500 ರೂಪಾಯಿ ಆಗುತ್ತದೆ. ನಮ್ಮ ಪ್ರಜಾಧ್ವನಿಯ ಮೊದಲ ಗ್ಯಾರಂಟಿಯಾಗಿ ಪ್ರತೀ ಮನೆಗೆ 200 ಯುನಿಟ್. ಪ್ರತಿ ತಿಂಗಳು ಬಿಲ್ 200 ಯೂನಿಟ್ವರೆಗೆ ಕಟ್ಟುವಂತಿಲ್ಲ. ಕಾಂಗ್ರೆಸ್ನ ಮೊದಲ ಗ್ಯಾರಂಟಿಯನ್ನು ಬೆಳಗಾವಿಯ ಪುಣ್ಯ ಭೂಮಿಯಲ್ಲಿ ನಾವು ಅನೌನ್ಸ್ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ನುಡಿದಂತೆ ನಾವು ನಡೆಯುತ್ತೇನೆ. ದಿನನಿತ್ಯ ಜನಸಾಮಾನ್ಯರು ದರ ಏರಿಕೆಯಿಂದ ರೋಸಿ ಹೋಗಿದ್ದಾರೆ. ಇದರಿಂದಾಗಿ ನಾವು ಅಧಿಕಾರಕ್ಕೆ ಬಂದ್ರೆ ಉಚಿತ ವಿದ್ಯುತ್ ಜೊತೆಗೆ ಹಲವು ಜನಪರ ಯೋಜನೆ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರು ಈ ಭೂಮಿಯಲ್ಲಿ ಕಾಂಗ್ರೆಸ್ನ ನಾಯಕತ್ವವಹಿಸಿಕೊಂಡು ಬ್ರಿಟಿಷರನ್ನು ಓಡಿಸುವ ಪ್ರಯತ್ನ ಮಾಡಿದರು. ಅದೇ ರೀತಿ ಬಿಜೆಪಿಯವರನ್ನು ಓಡಿಸಲು ಇದೇ ಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ಬೆಂಗಳೂರು: ತೆಲಂಗಾಣದ ಮಾದರಿಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್ಸೆಟ್ಗಳಿಗೆ 24/7 ಗುಣಮಟ್ಟದ ಉಚಿತ ವಿದ್ಯುತ್ ಪೂರೈಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದರು.
ಇತ್ತೀಚೆಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ್ದ ಅವರು, ಈ ಅಂಶವನ್ನು ಚುನಾವಣಾ ಪ್ರಣಾಳಿಕೆಯಲ್ಲಿಯೂ ಸೇರಿಸಲಾಗುವುದು. ಅಲ್ಲದೇ, ಕರ್ನಾಟಕದ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಆಸಕ್ತಿ ಕೆ. ಚಂದ್ರಶೇಖರ್ ರಾವ್ ಅವರ ನೇತೃತ್ವದ ಬಿಆರ್ಎಸ್ ಪಕ್ಷಕ್ಕೆ ಇಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗಳನ್ನೇ ಬೆಂಬಲಿಸುವ ನಿರ್ಧಾರಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಬಂದಿದ್ದಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಸಿಆರ್ ಚಿಂತನೆ ನಡೆಸಿದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದಲ್ಲಿ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲಿದ್ದಾರೆ ಎಂದು ಅವರು ಹೇಳಿದ್ದರು.
ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೃಷಿ ಪಂಪ್ಸೆಟ್ಗಳಿಗೆ 24/7 ಉಚಿತ ವಿದ್ಯುತ್ : ಹೆಚ್ ಡಿ ಕುಮಾರಸ್ವಾಮಿ