ಬೆಳಗಾವಿ:ಯಾವುದೇ ಕ್ಷಣದಲ್ಲಾದರೂ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕೊರೊನಾ ಲಸಿಕೆ ಡೋಸ್ ಬರುವ ಹಿನ್ನೆಲೆ ನಗರದ ಟಿಳಕವಾಡಿ ವ್ಯಾಕ್ಸಿನ್ ಡಿಪೋದಲ್ಲಿ ಇನ್ಸೂಲೇಟೆಡ್ ವ್ಯಾನ್ ಸಜ್ಜಾಗಿ ನಿಂತಿದ್ದು, ಇಂದು ರಾತ್ರಿಯೇ ನಗರಕ್ಕೆ ಕೋವ್ಯಾಕ್ಸಿನ್ ಬರುವ ಸಾಧ್ಯತೆ ಇದೆ ಎಂದು ಆರ್ಸಿಎಚ್ಒ ಡಾ.ಈಶ್ವರ ಗಡಾದ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ನಡೆಯುವ ಕೋಲ್ಡ್ ಚೈನ್ ಪಾಯಿಂಟ್ಸ್‌ಗಳಿಗೂ ಇದೇ ವ್ಯಾನ್‌ನಿಂದ ಲಸಿಕೆ ಸಾಗಾಟ ಮಾಡಲಾಗುತ್ತದೆ. ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೂ ಲಸಿಕೆ ಸಾಗಿಸಲು ಇದೇ ಮಾದರಿ ವಾಹನ ಬಳಕೆ ಮಾಡಿಕೊಳ್ಳಲಾಗುವುದು.ಆಯಾ ಜಿಲ್ಲೆಗಳಲ್ಲಿ ಇರುವ ಇನ್ಸೂಲೇಟೆಡ್ ವಾಹನಗಳು ಬಂದು ಲಸಿಕೆ ತೆಗೆದುಕೊಂಡು ಹೋಗಲಿದ್ದು, ಸದ್ಯ ಜಿಲ್ಲೆಯಲ್ಲಿ ಎರಡು ಇನ್ಸೂಲೇಟೆಡ್ ವಾಹನಗಳಿವೆ. ಇದಲ್ಲದೇ ಜಿಲ್ಲಾ ಆರೋಗ್ಯ ಇಲಾಖೆಯಿಂದ ವ್ಯಾಕ್ಸಿನ್ ಡಿಪೋದಲ್ಲಿರುವ ವಾಕ್ ಇನ್ ಕೂಲರ್‌ನಲ್ಲಿ ಲಸಿಕೆ ಸಂಗ್ರಹಕ್ಕೆ ಸಕಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವ್ಯಾಕ್ಸಿನ್ ಡಿಪೋದ ವಾಕ್ ಇನ್ ಕೂಲರ್ 13 ರಿಂದ 13.5 ಲಕ್ಷ ಲಸಿಕೆ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ವಾಕ್ ಇನ್ ಕೂಲರ್‌ನಲ್ಲಿ ಈಗಾಗಲೇ ನಾಲ್ಕು ಲಕ್ಷ ಇತರೆ ಲಸಿಕೆ ಸಂಗ್ರಹಿಸಿಡಲಾಗಿದೆ. 9 ಲಕ್ಷ ಲಸಿಕೆ ಡೋಸ್ ಬಂದರೂ ವಾಕ್ ಇನ್ ಕೂಲರ್‌ನಲ್ಲಿ ಲಸಿಕೆ ಇರಿಸಬಹುದು.ಲಸಿಕೆಯನ್ನು ಇಂಜೆಕ್ಟ್ ಮಾಡಲು ಈಗಾಗಲೇ ಒಂದು ಲಾರಿ ಸಿರಿಂಜ್ ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿ,ಬಾಗಲಕೋಟೆಗೆ ಒಟ್ಟು 24 ಲಕ್ಷ ಸಿರೀಂಜ್‌ಗಳು ಶಿಫ್ಟ್ ಆಗಲಿವೆ. ಟಿಟಿ ಇಂಜೆಕ್ಷನ್ ರೀತಿಯಲ್ಲೇ ಎಡ ರಟ್ಟೆಯ ಸ್ನಾಯುಗಳಿಗೆ 0.5 ಎಂಇಲ್ ಲಸಿಕೆ ಇಂಜೆಕ್ಟ್ ಮಾಡಲಾಗುತ್ತೆ ಎಂದು ತಿಳಿಸಿದರು.