ಬೆಳಗಾವಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭಿವೃದ್ಧಿಗಾಗಿ ಆಧುನಿಕ ವಾತಾವರಣಕ್ಕೆ ಒಗ್ಗಬೇಕಾಗುತ್ತದೆ. ಆದರೆ ನಾಡು, ನುಡಿ, ಸಂಸ್ಕೃತಿ ಮರೆತು ಮೂಢರಾಗಬಾರದು. ಕನ್ನಡ ಭಾಷೆ, ಸಂಸ್ಕೃತಿಯ ಸಂರಕ್ಷಣೆಗೆ ನಾವೆಲ್ಲಾ ಅಭಿಮಾನ ಮೆರೆಯಲೇಬೇಕಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
'ಮಗುವಿಗೆ ಎದೆಹಾಲು ಕುಡಿಸಲಾರಳು ಆಧುನಿಕ ತಾಯಿ ಇವಳಯ್ಯ..ಬಾಟಲಿ ಹಾಲು ಕುಡಿಸಿ ಚಾಕಲೇಟ್ ತಿನ್ನಿಸಿ ಪಾಪ್ ಸಾಂಗ್ ಹಾಡುವಳಯ್ಯ..' ಎಂದು ಜನಪದ ಗೀತೆ ಹಾಡುವ ಮೂಲಕ ಸಚಿವೆ ಜೊಲ್ಲೆ ಅವರು ಎಲ್ಲೇ ಇದ್ದರೂ, ಹೇಗೆಯೇ ಇದ್ದರೂ ಕನ್ನಡ ನೆಲದ ಪ್ರತಿ ತಾಯಿಯೂ ಕನ್ನಡತಿಯೇ ಆಗಿರಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಮಾತನಾಡಿ, ನಾಡು, ನುಡಿ ವಿಚಾರ ಬರೀ ಕೂಗಾಟ, ಪ್ರತಿಭಟನೆಗೆ ಸೀಮಿತವಾಗಬಾರದು. ಬದಲಾಗಿ ಪ್ರತಿ ಕ್ಷಣದ ಜೀವನದಲ್ಲಿ ಕನ್ನಡ ಅಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಏಕಕಾಲಕ್ಕೆ ನಾಡಗೀತೆ ಪ್ರಸ್ತುತ: ಕಾರ್ಯಕ್ರಮ ಆರಂಭದಿಂದ ಜಿಲ್ಲೆಯ ನಾನಾ ಶಾಲೆ, ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಗೀತ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಏಕಕಾಲಕ್ಕೆ ನಾಡಗೀತೆ ಪ್ರಸ್ತುತಪಡಿಸಿದರು.
ನಾಡ ದೇವಿಗೆ ಕೋಟಿ ಕಂಠದಾರತಿ: ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ಪ್ರಸ್ತುತಪಡಿಸುವ ಮೂಲಕ ವಿದ್ಯಾರ್ಥಿಗಳು, ಅಧಿಕಾರಿಗಳು ಭುವನೇಶ್ವರಿಗೆ ಕೋಟಿ ಕಂಠದಾರತಿ ಬೆಳಗಿದರು. ಕನ್ನಡ ನೆಲ, ಜಲ, ಜನ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಬದ್ಧವಾಗಿರುತ್ತೇವೆ ಎಂದು ಒಕ್ಕೊರಲಿನಿಂದ ಪ್ರತಿಜ್ಞೆ ಮಾಡಿದರು.
ಆಗಸದಲ್ಲಿ ಬಲೂನ್: ಕೋಟಿ ಕಂಠ ಗಾಯನದ ಯಶಸ್ವಿ ಹಿನ್ನೆಲೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಬಲೂನ್ ಗುಚ್ಛಗಳನ್ನು ಆಗಸದೆತ್ತರಕ್ಕೆ ಹಾರಿ ಬಿಡಲಾಯಿತು. ಹಳದಿ, ಕೆಂಪು ಬಣ್ಣದ ಬಲೂಲ್‌ಗಳು ಮುಗಿಲೆತ್ತರಕ್ಕೆ ಹಾರಿ ವರ್ಣರಂಜಿತವಾಗಿ ಮನಸೆಳೆದವು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಪಂ ಸಿಇಒ ದರ್ಶನ ಹೆಚ್ ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಜಿಲ್ಲಾ ಪೊಲೀಸ್ ದಂಡಾಧಿಕಾರಿ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾವಿರಾರೂ ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ಓದಿ:ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ: ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡಿಗೆ ದನಿಯಾದ ಸಿಎಂ