ಬೆಳಗಾವಿ: ಸಾರಿಗೆ ನೌಕರರ ಎಂಟು ಬೇಡಿಕೆ ಈಡೇರಿಸಿದ್ದೇವೆ ಎಂದು ಸಿಎಂ ಸುಳ್ಳು ಹೇಳ್ತಿದ್ದಾರೆ. ಒಂದೂ ಬೇಡಿಕೆಯನ್ನು ಅವರು ಈಡೇರಿಸಿಲ್ಲ. ಬೇಡಿಕೆ ಈಡೇರುವರೆಗೆ ಮುಷ್ಕರ ಕೈ ಬಿಡುವುದಿಲ್ಲ ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದ ವಚನ ಭ್ರಷ್ಟತನವೇ ಕಾರಣ. ಈ ಹಿಂದೆ ಮುಷ್ಕರ ನಡೆದಾಗ ಆರಂಭದಲ್ಲಿ 8 ಬೇಡಿಕೆ ಈಡೇರಿಸುತ್ತೇವೆ. 3 ತಿಂಗಳ ಬಳಿಕ ಆರನೇ ವೇತನ ಆಯೋಗ ಜಾರಿಗೊಳಿಸುವುದಾಗಿ ಹೇಳಿತ್ತು. ಎಂಟು ಬೇಡಿಕೆಯೂ ಈಡೇರಿಲ್ಲ. ನಮ್ಮ ಪ್ರಮುಖ ಬೇಡಿಕೆಯಾದ ಆರನೇ ವೇತನವೂ ಜಾರಿಯಾಗಿಲ್ಲ. ಆರನೇ ವೇತನ ಆಯೋಗ ಜಾರಿಯೇ ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಅದನ್ನು ಬಿಟ್ಟು ಸರ್ಕಾರ ಏನೇನೋ ಹೇಳಿತ್ತು. ಅದು ಹೇಳಿದಂಗೆ ಎಂಟೂ ಬೇಡಿಕೆಯೂ ಈಡೇರಿಲ್ಲ. ಈಗಿನ ಮುಷ್ಕರಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ವಾಹನ ಚಾಲಕನ ಬೇಸಿಕ್ ಸಂಬಳವೂ ಹೆಚ್ಚಿದೆ. ಸಾರಿಗೆ ನೌಕರರ ಬೇಸಿಕ್ ಏಕೆ ಶೆ. 12 ರಷ್ಟಿದೆ. ಸಾರಿಗೆ ನೌಕರರೇನು ದಳ್ಳಾಳಿ ಅಂಗಡಿಗೆ ಖರೀದಿಗೆ ಹೋಗಿದ್ದಾರೆಯೇ, ಇಂದು ಶೇ. 8 ಅಂತಾರೆ, ನಾಳೆ ಶೇ.10 ರಷ್ಟು ಸಂಬಳ ಹೆಚ್ಚಿಸುತ್ತೇನೆ ಅಂತಾರೆ. ಇದೇನು ಸರ್ಕಾರದ ನೀತಿಯೇ, ಶ್ರಮವಹಿಸಿ ದುಡಿಯುವ ಸಾರಿಗೆ ನೌಕರರ ಮೇಲೇಕೆ ಸರ್ಕಾರದ ಕೋಪ. ಬೇಡಿಕೆ ಈಡೇರಿಕೆಗೆ ಸಾರಿಗೆ ನೌಕರರು ನ್ಯಾಯಯುತ ಮುಷ್ಕರ ನಡೆಸುತ್ತಿದ್ದಾರೆ. ಅದಕ್ಕೆ ನಾನು ನೈತಿಕ ಬೆಂಬಲ ನೀಡಿದ್ದೇನೆ. ಮುಷ್ಕರದಿಂದ ಪ್ರಯಾಣಿಕರ ತೊಂದರೆ ಆಗುತ್ತಿರುವುದು ನಿಜ. ಇದಕ್ಕೆ ಸರ್ಕಾರದ ಮೊಂಡುತನವೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಬಿಎಸ್ವೈ ಕುಳಿತಿರುವ ಹಡಗೇ ಈಗ ಮುಳುಗುತ್ತಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಆತ್ಮಹತ್ಯೆ ಮಾಡಿಕೊಳ್ಳಬೇಡಿ:
ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಯುತ್ತಿದೆ. ಯಾರೂ ಧೃತಿಗೆಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ರೈತ ಸಮುದಾಯಕ್ಕೆ ಬಂದಿರುವ ಸ್ಥಿತಿ ಸಾರಿಗೆ ನೌಕರರಿಗೆ ಬರುವುದು ಬೇಡ. ಆತ್ಮಹತ್ಯೆ ಪ್ರಯತ್ನ ಬೇಡ. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಕುಟುಂಬಕ್ಕೆ ತೊಂದರೆ ಆಗುತ್ತದೆ. ಮತ್ತಷ್ಟು ಹೊರೆ ಆಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಮನವಿ ಮಾಡುತ್ತೇನೆ.
ಸರ್ಕಾರ ಸಾರಿಗೆ ನಿಗಮವನ್ನು ವಾಣಿಜ್ಯ ದೃಷ್ಟಿಯಿಂದ ನೋಡಬಾರದು. ಸಚಿವ ಆರ್. ಅಶೋಕ್ ಅವರ ಹೇಳಿಕೆ ಸರಿಯಲ್ಲ. ನಾನೇನು ಸಾರಿಗೆ ನೌಕರರ ದಿಕ್ಕು ತಪ್ಪಿಸುತ್ತಿಲ್ಲ. ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದೇನೆ ಎಂದರು.