ಬೆಳಗಾವಿ : ಕಪ್ಪಾ ಬೇಕೆ ನಿಮ್ಗೇ ಕಪ್ಪಾ ನಿಮಗೇಕೆ ಕೊಡಬೇಕು ಕಪ್ಪಾ ಎಂದು ಬ್ರಿಟೀಷ್ ಸಾಮ್ರಾಜ್ಯದ ವಿರುದ್ದ ಹೋರಾಡಿ ದೇಶದಕ್ಕಾಗಿ ಪ್ರಾಣ ನೀಡಿದ ಕಿತ್ತೂರು ಆಸ್ಥಾನದ ರಾಣಿ ಚೆನ್ನಮ್ಮಳ ಅದ್ದೂರಿ ಉತ್ಸವಕ್ಕೆ ಇಂದು ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಈ ನಾಡಿದ ಧೀರ ಮಹಿಳೆಯ ಉತ್ಸವಕ್ಕೆ ಇಡೀ ಕಿತ್ತೂರು ತಾಲೂಕು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.
ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭಗೊಂಡ ಕಲಾವಾಹಿನಿ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಾಸಿಕ ಡೋಲು, ಡೊಳ್ಳು ಕುಣಿತ, ವೀರಗಾಸೆ, ಶಿವಮೊಗ್ಗ ಜಿಲ್ಲೆಯ ಮಹಿಳಾ ಡೊಳ್ಳುಕುಣಿತ, ತಾಸೆ ವಾದನ, ಗೊಂಬೆ ಕುಣಿತ, ಜಗ್ಗಲಿಗೆ, ಹಲಗೆ ವಾದನ, ಜಾಂಜ್ ಪಥಕ್, ಕೋಲಾಟ, ನಂದಿಕೋಲು, ವಿವಿಧ ವೇಷಧಾರಿಗಳು ಮತ್ತಿತರ ಜಾನಪದ ಕಲಾತಂಡಗಳ ನೂರಾರು ಕಲಾವಿದರು ನಾಡಿನ ಕಲಾವೈಭವವನ್ನು ಅನಾವರಣಗೊಳಿಸಿದರು.
ಕುಂಭಹೊತ್ತ ನೂರಾರು ಮಹಿಳೆಯರು ಜತೆಗೆ ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಮೆರಗು ತಂದರು. ಜೊತೆಗೆ ಕನ್ನಡ ಕಂಪು ಸೂಸುವ ಗೀತೆಗಳ ಗಾಯನ ಇಲ್ಲಿ ನಡೆಯಿತು. ಅಷ್ಟೇ ಅಲ್ಲದೆ ಕಿತ್ತೂರಿನ ಆಸ್ಥಾನದ ಸಿಪಾಯಿಗಳಾದ ಕಿತ್ತೂರಿನ ಮಹಾದ್ವಾರದ ಎರಡೂ ಬದಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಕಂಚಿನ ಪುತ್ಥಳಿಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು.