ಬೆಳಗಾವಿ: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ಜ. 15ರಿಂದ ಫೆ.27ರವರೆಗೆ 'ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನ' ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕ್ಷತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಬೆಳಗಾವಿಯ 800, ಚಿಕ್ಕೋಡಿಯ 600 ಗ್ರಾಮಗಳಲ್ಲಿ ನೆಲೆಸಿರುವ ಹತ್ತು ಲಕ್ಷ ಕುಟುಂಬಗಳನ್ನು ಮಂದಿರ ನಿಧಿ ಸಮರ್ಪಣ ಕಾರ್ಯಕ್ರಮದ ಅಭಿಯಾನ ನಿಮಿತ್ತ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಎಲ್ಲ ಸಂತರು, ಮಠಾಧೀಶರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ಎಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು. ಜನರಲ್ಲಿ ತ್ಯಾಗ ಮನೋಭಾವ, ಆಧ್ಯಾತ್ಮಿಕತೆ ಬರಬೇಕು. ರಾಮನ ವಿಚಾರಗಳು ಜನರನ್ನು ಮುಟ್ಟಬೇಕು. ಸಮಸ್ತ ಸಮಾಜ ಬಾಂಧವರು ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದ್ರು.
10, 100, 1,000 ಮುದ್ರಿತವಾದ ಕೂಪನ್ಗಳ ಸಹಾಯದಿಂದ ನಿಧಿ ಸಮರ್ಪಣೆ ನಡೆಯಲಿದೆ. 2 ಸಾವಿರ ರೂಗಳಿಗಿಂತ ಹೆಚ್ಚಿನ ಮೊತ್ತ ಕೊಡುವ ಭಕ್ತರಿಗೆ ರಸೀದಿ ನೀಡಲಾಗುತ್ತದೆ. ಅದಕ್ಕೂ ಹೆಚ್ಚಿನ ಹಣ ಸಂದಾಯ ಮಾಡುವ ಭಕ್ತರು, ಚೆಕ್ ಮೂಲಕ ನೇರವಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ಖಾತೆಗೆ ಜಮೆ ಮಾಡಬಹುದು ಎಂದು ತಿಳಿಸಿದ್ರು.