ಅಥಣಿ : ರಾಜ್ಯದಲ್ಲಿ ಎರಡನೆ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಆದರೆ, ತಾಲೂಕಿನ ಖವಟಕೊಪ್ಪ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಕ್ರಟ್ಟಿ ಗ್ರಾಪಂ ವ್ಯಾಪ್ತಿಯ ಖವಟಕೊಪ್ಪ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎರಡನೆ ಗ್ರಾಪಂ ಚುನಾವಣೆಯನ್ನ ಒಮ್ಮತದಿಂದ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮದಿಂದ ಯಾರೂ ಚುನಾವಣೆಗೆ ಸ್ಪರ್ಧೆ ಕೂಡ ಮಾಡಿಲ್ಲ. ಗ್ರಾಮದಲ್ಲಿ ಸುಮಾರು 3,500 ಮತದಾರರಿದ್ದಾರೆ.
ನಾಯಕರ ವಿರುದ್ಧ ಗುಡುಗು : ಅಥಣಿ ಕ್ಷೇತ್ರ ಪ್ರತಿನಿಧಿಸುವ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಗ್ರಾಮದ ಸಮಸ್ಯೆ ಆಲಿಸಲು ಮುಂದಾಗಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳ ಕಡೆಗೂ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರುತ್ತಿದ್ದಾರೆ.
ಓದಿ: ನಕಲಿ ಕೀ ಬಳಸಿ ಮೊಬೈಲ್ ಶಾಪ್ನಲ್ಲಿ ಕಳ್ಳತನ: ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಗ್ರಾಮಸ್ಥರಿಂದ ಆರೋಪ : ಆಲಮಟ್ಟಿ ಹಾಗೂ ಹಿಪ್ಪರಗಿ ಅಣೆಕಟ್ಟು ಹಿನ್ನೀರಿಗೆ ಮತ್ತು ಕೃಷ್ಣಾ ನದಿಯ ಪ್ರವಾಹಕ್ಕೆ ಖವಟಕೊಪ್ಪ ಗ್ರಾಮವು ಹೆಚ್ಚು ಹಾನಿಗೊಳಗಾಗಿದೆ. ನಮಗೆ ಪುನರ್ವಸತಿ ಕೇಂದ್ರ ಹಾಗೂ ಇನ್ನುಳಿದ ಗ್ರಾಮದಲ್ಲಿ160 ಮನೆಗಳಿಗೆ ಸ್ಥಳಾಂತರ ಪರಿಹಾರ ನೀಡಿಲ್ಲ.
ಸಿಸಿ ರೋಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸರಿಯಿಲ್ಲದೆ ಇರುವುದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಕಷ್ಟ ಪಡುತ್ತಿದ್ದೇವೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ಕೃಷ್ಣಾ ನದಿ ಪ್ರವಾಹದಿಂದ ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ಸರಿಯಾಗಿ ಪರಿಹಾರ ವಿತರಣೆಯಾಗಿಲ್ಲ. ಪ್ರಮುಖವಾಗಿ ಖವಟಕೊಪ್ಪ ಗ್ರಾಮಕ್ಕೆ ಪ್ರತ್ಯೇಕ ಪಂಚಾಯತ್ ನಿರ್ಮಾಣಕ್ಕೆ ಆಗ್ರಹಿಸಿ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ.
ಹಾಗಾಗಿ ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ. ಇದಕ್ಕೂ ಎಚ್ಚೆತ್ತುಕೊಳ್ಳದಿದ್ದರೆ, ಮುಂಬರುವ ತಾಲೂಕು ಪಂಚಾಯತ್,ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.