ಬೆಳಗಾವಿ: ಡಿ.ಕೆ.ಶಿವಕುಮಾರ್ ಎರಡನೇ ಬಾರಿ ತಿಹಾರ್ ಜೈಲಿಗೆ ಹೋಗಲು ರೆಡಿಯಾಗಬೇಕು ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಳಿನ್ ಕುಮಾರ್ ಕಟೀಲ್, ಹೆಚ್.ಡಿ.ಕುಮಾರಸ್ವಾಮಿ ನ್ಯಾಯಾಧೀಶರೇನು? ಎಂದು ತಿರುಗೇಟು ನೀಡಿದರು.
ಇನ್ನು ಸಿ.ಟಿ.ರವಿಗೆ ಲೂಟಿ ರವಿ ಎಂದು ಹೆಸರು ಕೊಟ್ಟಿದ್ದೇ ಅವರ ಪಾರ್ಟಿ. ಯಾರು ಯಾರು ಏನೇನು ಮಾತನಾಡಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಸಮಯ ಬರಲಿ, ಎಲ್ಲವನ್ನೂ ಹೇಳುತ್ತೇನೆ ಎಂದರು. ಇದೇ ವೇಳೆ, ಸಿ.ಎಂ.ಇಬ್ರಾಹಿಂ ಇಂಡಿಯಾ ಮೈತ್ರಿಕೂಟ ಬೆಂಬಲಿಸುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಹದಾಯಿ ಯೋಜನೆ ಜಾರಿಗೆ ಎದುರಾಗಿರುವ ಅಡೆತಡೆಗಳನ್ನು ಕೇಂದ್ರ ಸರ್ಕಾರ ನಿವಾರಿಸಬೇಕು. ಯೋಜನೆ ಜಾರಿಗೆ ನಾವು ಬದ್ಧ ಎಂದರು. ಬೆಳಗಾವಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕಾವೇರಿ ನದಿ ನೀರು ವಿವಾದ ಸಂಬಂಧ ಆರಂಭದಲ್ಲಿ ನಾವು ಬ್ಯುಸಿ ಇದ್ದೆವು. ಮೇಕೆದಾಟು ಯೋಜನೆಯಂತೆ ಮಹದಾಯಿಯನ್ನೂ ಆದ್ಯತೆ ಮೇರೆಗೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಆಡಳಿತದಲ್ಲಿ ಮಹದಾಯಿ ಯೋಜನೆ ಜಾರಿ ಆಗಿಯೇ ಬಿಟ್ಟಿತು ಎಂದು ಬೀಗಿದ್ದರು. ಅವರು ಎಲ್ಲ ಕಡೆಯೂ ವಿಜಯೋತ್ಸವ ಮಾಡಿದರು. ತಕ್ಷಣ ಕೇಂದ್ರ ಸರ್ಕಾರ ಅಡೆ ತಡೆಗಳನ್ನು ನಿವಾರಿಸಿ ನಮಗೆ ಅನುಕೂಲ ಮಾಡಿ ಕೊಡಬೇಕು. ಮಹದಾಯಿ ಜಾರಿಗೊಳಿಸಲು ನಮ್ಮ ಸರ್ಕಾರ ಇಚ್ಛಾಶಕ್ತಿ ಹೊಂದಿದೆ ಎಂದರು.
ಜಲಾಶಯಗಳಲ್ಲಿ ನೀರಿನ ಪ್ರಮಾಣ: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದರೂ ಈ ಭಾಗದ ನೀರಾವರಿ ಕಾಮಗಾರಿಗಳ ಸ್ಥಿತಿಗತಿ, ನೀರಿನ ಪ್ರಮಾಣ ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಜಿಲ್ಲೆಯ ಮಲಪ್ರಭಾ ನದಿಯ ರೇಣುಕಾ ಸಾಗರ ಜಲಾಶಯ ಶೇ.53ರಷ್ಟು ತುಂಬಿದ್ದು, ಇನ್ನುಳಿದಂತೆ ಘಟಪ್ರಭಾ, ಮಾರ್ಕಂಡೇಯ, ಹಿಪ್ಪರಗಿ, ಮಲಪ್ರಭಾ, ಆಲಮಟ್ಟಿ ಜಲಾಶಯಗಳು ಶೇ.90ಕ್ಕಿಂತ ಹೆಚ್ಚು ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.
ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಈ ಭಾಗದ ನೀರಾವರಿ ಇಲಾಖೆಗೆ 1322 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 671 ತುಂಬಿದ್ದು, ಬಾಕಿ 651 ಹುದ್ದೆಗಳು ಖಾಲಿಯಿವೆ. ಹಾಗಾಗಿ, ಇದೇ 28ರಂದು ಎಲ್ಲ ಮಂಡಳಿಗಳ ಸಭೆ ಕರೆದಿದ್ದು, ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ನೀರು ಬಳಕೆದಾರರ ಸಂಘ ಸ್ಥಾಪನೆ ಶೀಘ್ರ: ಮುಂದಿನ ನೂರು ದಿನಗಳಲ್ಲಿ ನೀರು ಬಳಕೆದಾರರ ಸಂಘ ಸ್ಥಾಪಿಸಬೇಕು. ಎಲ್ಲೆಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲವೋ, ಅವರನ್ನು ದೂರವಿಟ್ಟು ಹೊಸದಾಗಿ ಚುನಾವಣೆ ನಡೆಸಿ ಸಂಘಗಳನ್ನು ಸ್ಥಾಪಿಸಬೇಕು. ಅಭಿವೃದ್ಧಿ, ನೀರಿನ ರಕ್ಷಣೆ, ಕೆನಾಲ್ ದುರಸ್ಥಿ ವಿಚಾರದಲ್ಲಿ ರೈತರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅದೇ ರೀತಿ ಕೆನಾಲ್ಗಳ ದುರಸ್ಥಿ ಪಡಿಸುವುದನ್ನು ನರೇಗಾ ಯೋಜನೆಯಡಿ ಕೈಗೊಳ್ಳುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕೆನಾಲ್, ಕೆರೆಗಳಲ್ಲಿ ನೀರು ಕಳ್ಳತನ ಆಗುವುದನ್ನು ತಡೆಗಟ್ಟಲು ಒಂದು ಪ್ರತ್ಯೇಕ ಕಾನೂನು ರಚಿಸಲಿದ್ದೇವೆ. ಮಹಾರಾಷ್ಟ್ರ ಮಾದರಿ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಚಳಿಗಾಲ ಅಧಿವೇಶನ ನಡೆಸುತ್ತೀರಾ ಎಂಬ ಪ್ರಶ್ನೆಗೆ, ನಾಳೆ, ನಾಡಿದ್ದೋ ಕ್ಯಾಬಿನೆಟ್ ಸಭೆ ಇದೆ. ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಕುಡಚಿ ಶಾಸಕ ಮಹೇಂದ್ರ ತಮ್ಮನ್ನವರ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಇದ್ದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತಕ್ಕೆ ಗೈರು ವಿಚಾರ.. ಡಿಸಿಎಂ ಡಿಕೆಶಿ ಹೇಳಿದ್ದೇನು..?