ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಡಿಸೆಂಬರ್ 19 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಒಟ್ಟು 6 ವಿಧೇಯಕ ಮಂಡನೆಗೆ ನಿರ್ಧರಿಸಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬೆಂಗಳೂರು ಭೂಸುಧಾರಣೆ ವಿಧೇಯಕ, ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ, ಗಡಿಪ್ರದೇಶ ಅಭಿವೃದ್ಧಿ ವಿಧೇಯಕ ಸೇರಿದಂತೆ ಅಧಿವೇಶನದಲ್ಲಿ 6 ಮಸೂದೆಗಳನ್ನು ಮಂಡಿಸಲಾಗುವುದು. ಇವುಗಳ ಬಗ್ಗೆ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಂಗೀಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅಧಿವೇಶನದಲ್ಲಿ ಶಾಸಕರ, ಸಚಿವರ ಹಾಜರಾತಿ ಕಡ್ಡಾಯಕ್ಕೆ ಕ್ರಮ ವಹಿಸಲಾಗಿದೆ. ಅಧಿವೇಶನಕ್ಕೆ ಹೋಗಲ್ಲ, ಅಲ್ಲೇನಿದೆ ಎಂಬ ಶಾಸಕರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು. ಅದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಶಾಸಕರ ಹಾಜರಾತಿ ಕಡ್ಡಾಯ. ಗೈರಾಗು ವುದಾದರೆ ಪೂರ್ವ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ವಿಶೇಷ ಆದ್ಯತೆ ನೀಡಲಾಗುವುದು. ಈ ಸಲವೂ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದ್ದೇವೆ. ಪ್ರಶಸ್ತಿ ಪ್ರದಾನ ದಿನಾಂಕ, ಶಾಸಕರ ಹೆಸರಿನ್ನೂ ಅಂತಿಮವಾಗಿಲ್ಲ. ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಅಚ್ಚುಕಟ್ಟಿನ ಅಧಿವೇಶನಕ್ಕೆ ಸೂಚನೆ ಕೊಟ್ಟಿದ್ದೇನೆ. ಸಚಿವರು, ಶಾಸಕರು, ಅಧಿಕಾರಿಗಳ ವಸತಿ, ಊಟ, ವಾಹನದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲು ತಿಳಿಸಿದ್ದೇನೆ ಎಂದು ಕಾಗೇರಿ ಮಾಹಿತಿ ನೀಡಿದರು.
ಇದಕ್ಕೂ ಮುನ್ನ, ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ಸ್ಪೀಕರ್ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಳಗಾವಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿ: ಮರಾಠ ಸಾಹಿತ್ಯ ಸಮ್ಮೇಳನ ನಿರ್ಣಯ