ಬೆಳಗಾವಿ : ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಉತ್ಸವ ನಡೆಯಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೆಎಸ್ಆರ್ಪಿ ಕಮಾಂಡೆಂಟ್ ಹಂಜಾ ಹುಸೇನ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಉತ್ಸವದ ಭಾಗವಾಗಿ ಇಂದು ಸಂಜೆ ಚೆನ್ನಮ್ಮ ವೃತ್ತದಲ್ಲಿ ಸಾಮೂಹಿಕ ವಾದ್ಯಮೇಳದ ಕಾರ್ಯಕ್ರಮ ಜರುಗಲಿವೆ. ಉತ್ಸವದಲ್ಲಿ ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸೈನಿಕ ಮತ್ತು ಪೊಲೀಸ್ ಗೀತೆಗಳ ಅನಾವರಣವಾಗಲಿದೆ ಎಂದರು.
ಓದಿ:ಸರ್ಕಾರಿ ಶಾಲೆಗಳ ಕಡೆ ಮುಖ ಮಾಡಿದ ಚಿಕ್ಕೋಡಿ ಉಪವಿಭಾಗದ ಮಕ್ಕಳು
ನಾಳೆ ಬೆಳಗ್ಗೆ 9ಕ್ಕೆ ಕೆಎಸ್ ಆರ್ ಪಿಯ 6ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮ ಪಥಸಂಚಲನ ಕಾರ್ಯಕ್ರಮ ಕೆಎಸ್ಆರ್ ಪಿ ತರಬೇತಿ ಶಾಲೆ ಕಂಗ್ರಾಳಿಯಲ್ಲಿ ನಡೆಯಲಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಪೊಲೀಸ್ ಇಲಾಖೆ ಮುಖ್ಯಸ್ಥ ಪ್ರವೀಣ ಸೂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಒಟ್ಟು 187 ಕೆಎಸ್ಆರ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆಯಲಿದೆ. ಇನ್ನು ಸಂಜೆ 7 ರಿಂದ 9 ರವರೆಗೆ ಕೆಎಸ್ಆರ್ ಪಿ ಉತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದ ಮೂಲಕ ಇಲಾಖೆ ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಲಿದೆ ಎಂದರು.