ಬೆಂಗಳೂರು: 2022 ನೇ ಸಾಲಿನ ಕರ್ನಾಟಕ ಸ್ಟಾಂಪ್ (ನಾಲ್ಕನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಇಂದು ಅಂಗೀಕಾರ ದೊರೆಯಿತು. ಕಂದಾಯ ಸಚಿವ ಆರ್. ಅಶೋಕ್ ಅವರು, ವಿಧೇಯಕವನ್ನು ಮಂಡಿಸಿ ಅಂಗೀಕರಿಸಬೇಕೆಂದು ಕೋರಿದರು. ಬೀದಿ ಬದಿಯ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿಯಡಿ ಸ್ಟಾಂಪ್ ಶುಲ್ಕ ಮನ್ನಾ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಸದನಕ್ಕೆ ಸಚಿವರು ಮನವರಿಕೆ ಮಾಡಿಕೊಟ್ಟರು. ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧ್ವನಿಮತದ ಮೂಲಕ ಈ ವಿಧೇಯಕಕ್ಕೆ ಅಂಗೀಕಾರ ನೀಡಿದರು.
ಜೆಡಿಎಸ್ ಆಕ್ಷೇಪ : ಇಂದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಸಚಿವರ ಗೈರು ಹಾಜರಿಗೆ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಚಿವರು ಯಾರೂ ಇಲ್ಲ. ನಾವು ಯಾಕೆ ಬರಬೇಕು. ನಾವು ಮನೆಗೆ ಹೋಗುತ್ತೇವೆ ಎಂದು ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಬೇಸರ ವ್ಯಕ್ತಪಡಿಸಿದರು.
ಓದಿ: ವಿಧಾನಸಭೆಯಲ್ಲಿ ಕರ್ನಾಟಕ ಸ್ಟಾಂಪ್ (ಎರಡನೇ ತಿದ್ದುಪಡಿ) ವಿಧೇಯಕ ಅಂಗೀಕಾರ