ಬೆಳಗಾವಿ: ನಗರದ ಪಿಯು ಕಾಲೇಜೊಂದರಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಆರ್ ಪಿ ಡಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.
ಬೆಳಗಾವಿ-ಗೋವಾ ಹೆದ್ದಾರಿ ತಡೆದ ಪ್ರತಿಭಟನಾಕಾರರು ಎರಡು ಗಂಟೆಗೂ ಹೆಚ್ಚು ಸಮಯ ವೃತ್ತದಲ್ಲಿ ಧರಣಿ ಕುಳಿತರು. ಈ ವೇಳೆ ಕಾಲೇಜು, ಸರ್ಕಾರ, ಪೊಲೀಸರು, ಸ್ಥಳೀಯ ರಾಜಕಾರಣಿಗಳು ಹಾಗೂ ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಟೈರ್ಗೆ ಬೆಂಕಿ ಹಚ್ಚಿ ಗೋವಾ, ಖಾನಾಪುರ ಮಾರ್ಗದ ವಾಹನ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಲವು ವಾಹನಗಳನ್ನು ರಾಣಿ ಚೆನ್ನಮ್ಮ ವೃತ್ತ, ಬಸವೇಶ್ವರ ವೃತ್ತದಿಂದಲೇ ಮಾರ್ಗ ಬದಲಿಸಲಾಯಿತು.
ಪೊಲೀಸರ ಮೇಲೆ ಆರೋಪ: ಧ್ವಜ ಹಿಡಿದು ಕುಣಿದ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರೇ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಮಾಧ್ಯಮದ ಮುಂದೆ ಆರೋಪ ಮಾಡಿದ್ದಾನೆ. ಕೂಡಲೇ ಪೊಲೀಸ್ ಅಧಿಕಾರಿ ಮೇಲೆ ಕ್ರಮ ವಹಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ನಾಡಧ್ವಜ ಹಿಡಿದು ಕುಣಿಯುತ್ತಿದ್ದ ವಿದ್ಯಾರ್ಥಿಗೆ ಥಳಿತ
ಕನ್ನಡ ತಾಯಿ ಭುವನೇಶ್ವರಿಯ ಮಕ್ಕಳಿಗೆ ಕರ್ನಾಟಕದಲ್ಲಿಯೇ ರಕ್ಷಣೆ ಇಲ್ಲವಾಗಿದೆ. ಕಾಲೇಜಿನಲ್ಲಿ ಕನ್ನಡ ಧ್ವಜ ಹಿಡಿದು ಕುಣಿಯುವುದರಲ್ಲಿ ತಪ್ಪೇನಿದೆ. ಈ ನಾಡಿನ ಧ್ವಜ ಎಲ್ಲಿ ಬೇಕಾದರೂ ಹಾರಿಸುತ್ತೇವೆ. ಇದನ್ನು ಸಹಿಸದ ಮರಾಠಿ ಹುಡುಗರ ಮೇಲೆ ಕ್ರಮ ಕೈಗೊಳ್ಳಬೇಕು, ಹಲ್ಲೆಕೋರರನ್ನು ಕಾಲೇಜಿನಿಂದ ಹೊರಹಾಕಬೇಕು, ಅವರಿಗೆ ಕರ್ನಾಟಕದಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡಬಾರದು, ಹುಡುಗರು ಅಪ್ರಾಪ್ತರಾಗಿದ್ದರೆ ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಎಂದು ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.