ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠಾ ಪ್ರಾಧಿಕಾರವನ್ನು ರದ್ದುಪಡಿಸದಿದ್ರೆ ಡಿ.5ರಂದು ಕರ್ನಾಟಕ ಬಂದ್‌ಗೆ ಬೆಂಬಲಿಸಿ ಉಗ್ರ ಪ್ರತಿಭಟನೆ ಮಾಡುವುದಾಗಿ ಕರವೇ ಕಾರ್ಯಕರ್ತರು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಎಂ ಬಿಎಸ್‌ವೈ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮನವಿ ಮಾಡಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು, ಕರ್ನಾಟಕ ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡುತ್ತಿರುವವರಲ್ಲಿ ಹೆಚ್ಚಾಗಿ ಮರಾಠಾ ಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ. ಈ ರೀತಿ ಅನೇಕ ನಾಡದ್ರೋಹ ಕೆಲಸಗಳನ್ನು ಮಾಡುತ್ತಿರುವ ಅಂಥಹ ಸಮುದಾಯಕ್ಕೆ ಮರಾಠಾ ಪ್ರಾಧಿಕಾರ ರಚನೆ ಮಾಡಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಮಗನ ಭವಿಷ್ಯಕ್ಕಾಗಿ ಸಿಎಂ ಬಿಎಸ್‌ವೈ ರಾಜಕಾರಣ ಮಾಡುತ್ತಿದ್ದು, ಸಮಾಜ ಒಡೆದು ಬಾಂಧವ್ಯ ಹಾಳು ಮಾಡುತ್ತಿದ್ದಾರೆ. ನಾವ್ಯಾರು ಮರಾಠಿ ವಿರೋಧಿಗಳಲ್ಲ. ಮರಾಠಾ ನಿಗಮ ವಾಪಸ್ ಪಡೆಯಬೇಕು, ಇಲ್ಲವಾದ್ರೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ 10 ಸಾವಿರ ಜನರನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.