ಅಥಣಿ: ಪಟ್ಟಣದ ವಕೀಲರಾದ ಬಿ.ಎಲ್.ಪಾಟೀಲ ಅವರು ಈ ಬಾರಿಯ 2020-21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅವರು ಮಾಡಿದ ಸಮಾಜಸೇವೆಯನ್ನು ಪರಿಗಣಿಸಿ ಸರ್ಕಾರವು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಹಾರಾಷ್ಟ್ರ ಗಡಿ ಹೊಂದಿರುವ ಅಥಣಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ, ವೇಶ್ಯೆಯರ ಮಕ್ಕಳಿಗಾಗಿ ವಸತಿ ಶಾಲೆಯನ್ನು ಆರಂಭಿಸಿದರು.
ಬಡವರು, ನಿರ್ಗತಿಕರು, ಶೋಷಿತರು ಮತ್ತು ದಲಿತರಿಗೆ ಕಾನೂನು ನೆರವು, ಜನತಾ ನ್ಯಾಯಾಲಯ ನಡೆಸಿಕೊಂಡು ಬಂದಿದ್ದರು. ಆ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಕೀಲ ಬಿ.ಎಲ್.ಪಾಟೀಲ್ ಅವರು, ದೇವದಾಸಿಯರು, ಶೋಷಿತರು, ನೋವುಂಡವರನ್ನು ಗುರುತಿಸುವ ಪರಂಪರೆ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿಲ್ಲ.
ಸಮ ಸಮಾಜಕ್ಕಾಗಿ ಹೋರಾಡಿದ ಮಹಾಮಾನವತಾವಾದಿ ಬಸವಣ್ಣನನ್ನೇ ಗುರುತಿಸದ ಸಮಾಜ ನಮ್ಮದು. ಹೀಗಿರುವಾಗ ನಾನು ಹಾಗೂ ನನ್ನ ಸಂಸ್ಥೆ ‘ವಿಮೋಚನಾ’ ಮಾಡಿದ ಅಲ್ಪಸೇವೆಯನ್ನು ಪರಿಗಣಿಸಿ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಪ್ರಶಸ್ತಿಯು ದೇವದಾಸಿಯರು, ನನ್ನ ಸಂಸ್ಥೆಯ ಎಲ್ಲ ಕಾರ್ಯಕರ್ತರಿಗೆ ಸಲ್ಲಬೇಕು. ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು ಹಾಗೂ ನೋವುಂಡವರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮುಂದೆಯೂ ಮಾಡಲಿ. ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಲಿ ಎಂದು ಆಶಿಸಿದರು. ಕಳೆದ ಆಗಸ್ಟ್ 20ರಂದು ಇವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.