ಬೆಳಗಾವಿ : ನಗರದ ಕಂಗ್ರಾಳಿ ಬಳಿಯ ರಾಜ್ಯ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಮಹಿಳಾ ವಿಶೇಷ ಮೀಸಲು ಪೊಲೀಸ್ ಕಾನ್ಸಟೇಬಲ್ ಸೇರಿದಂತೆ ಪ್ರಸ್ತುತ 6ನೇ ಪಡೆಯ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ವೇಳೆ ಪ್ರಶಿಕ್ಷಣಾರ್ಥಿಗಳಿಂದ ಗೃಹ ಸಚಿವರು ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕದ ಪೊಲೀಸರು ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠ ಪೊಲೀಸರಾಗಿದ್ದಾರೆ. ಅಂತಹ ಒಂದು ಪೊಲೀಸ್ ತಂಡಕ್ಕೆ ನೀವು ಸೇರಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮಗೆ ಕೊಟ್ಟಿರುವ ಈ ಖಾಕಿ, ಶಸ್ತ್ರಾಸ್ತ್ರಗಳ ಗೌರವವನ್ನು ಉಳಿಸುವ ಕೆಲಸವನ್ನು ನೀವು ಮಾಡಬೇಕು.
ಯಾವುದೇ ಒತ್ತಾಯ, ಒತ್ತಡಕ್ಕೂ ಮಣಿಯದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮಿಂದ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ಸಲಹೆ ನೀಡಿದರು.
187 ಪ್ರಶಿಕ್ಷಣಾರ್ಥಿಗಳು ನಿರ್ಗಮನ:
ಕೆಎಸ್ಆರ್‌ಪಿ 6ನೇ ಪಡೆಯ ಒಟ್ಟು 187 ಪ್ರಶಿಕ್ಷಣಾರ್ಥಿಗಳು ವೃತ್ತಿ ಬುನಾದಿ ತರಬೇತಿ ಪಡೆದು ನಿರ್ಗಮನವಾಗುವ ಮೂಲಕ ನಾಡ ಸೇವೆಗೆ ಅಣಿಯಾಗಿದ್ದಾರೆ. ಕೆಎಸ್ಆರ್‌ಪಿ ತರಬೇತಿ ಪಡೆದವರ ಪೈಕಿ 82 ಪದವೀಧರರು, 7 ಸ್ನಾತಕೋತ್ತರ ಪದವೀಧರರು ಹಾಗೂ 13 ಜನ ಪ್ರಶಿಕ್ಷಣಾರ್ಥಿಗಳು ಎಂಜಿನಿಯರಿಂಗ್ ಪದವಿಯನ್ನು ಪಡೆದಿರೋದು ವಿಶೇಷ.
ಇವರೆಲ್ಲರು ಹೊಸದಾಗಿ ರೂಪಗೊಂಡಿರುವ ಪಠ್ಯಕ್ರಮದನ್ವಯ ಉನ್ನತ ಮಟ್ಟದ ಹೊರಾಂಗಣ ಮತ್ತು ಒಳಾಂಗಣ ತರಬೇತಿ ಪಡೆದುಕೊಂಡಿದ್ದಾರೆ.
ಹೊರಾಂಗಣ ತರಬೇತಿಯ ಭಾಗವಾಗಿ ದೈಹಿಕ ತರಬೇತಿ, ಶಸ್ತ್ರರಹಿತ ಮತ್ತು ಶಸ್ತ್ರಸಹಿತ ಕವಾಯತು, ಆಧುನಿಕ ಆಯುಧಗಳ ಬಳಕೆ, ಲಾಠಿ ಕವಾಯತು, ಯುದ್ಧ ಕೌಶಲ್ಯ, ಅಶ್ರುವಾಯು ಪ್ರಯೋಗ, ಗುಂಪು ನಿಯಂತ್ರಣ, ನಿರಾಯುಧ ಹೋರಾಟ, ವಿವಿಐಪಿ ಭದ್ರತೆ, ಗುಪ್ತ ಮಾಹಿತಿ ಸಂಗ್ರಹ, ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಪತ್ತು ನಿರ್ವಹಣೆ ಅಗ್ನಿಶಾಮಕ ದಳಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ.
ತರಬೇತಿ ಪಡೆಯುವ ವೇಳೆ 51 ಜನ ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್ ತಗುಲಿ ಗುಣಮುಖರಾಗಿದ್ದಾರೆ. ಆ ಪೈಕಿ 33 ಜನರು ಪ್ರಶಿಕ್ಷಣಾರ್ಥಿಗಳು ತಮ್ಮ ಪ್ಲಾಸ್ಮಾ ದಾನ ಮಾಡಲು ಸ್ವಇಚ್ಛೆಯಿಂದ ಮುಂದೆ ಬಂದಿದ್ದು ಮತ್ತೊಂದು ವಿಶೇಷ.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಬೆನಕೆ, ಕೆಎಸ್ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್‌ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ್ ಬೋರಗಾಂವೆ, ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ, ಕೆಎಸ್ಆರ್‌ಪಿ ಕಮಾಂಡೆಂಟ್ ಹಂಜಾ ಹುಸೇನ್ ಉಪಸ್ಥಿತರಿದ್ದರು.