ಬೆಂಗಳೂರು: ಬೆಳಗಾವಿ ಗ್ರಾಮವೊಂದರಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ನಂತರ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯನ್ನು ಸಾರ್ವಜನಿಕರು ಭೇಟಿ ಮಾಡುವುದಕ್ಕೆ ಹೈಕೋರ್ಟ್ ತಾತ್ಕಾಲಿಕ ಕಡಿವಾಣ ಹಾಕಿದೆ.
ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರೊಂದಿಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂತ್ರಸ್ತೆ ಭೇಟಿಯಾಗುತ್ತಿರುವ ಸಂಬಂಧ ಮಾಧ್ಯಮಗಳಲ್ಲಿ ವೀಕ್ಷಿಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಶನಿವಾರ ತಮ್ಮ ಕಚೇರಿಯಲ್ಲಿ ತುರ್ತು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಅಲ್ಲದೇ, ಸಾಮಾನ್ಯವಾಗಿ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸುವುದಕ್ಕೆ ನ್ಯಾಯಾಲಯ ಮುಂದಾಗುವುದಿಲ್ಲ. ಆದರೆ, ಗ್ರಾಮದಲ್ಲಿ ನಡೆದಿದ್ದ ಘಟನೆ ಸಂತ್ರಸ್ತೆ ನೋವಿನಿಂದ ಕೊರಗುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಮಂದಿ ಭೇಟಿ ಮಾಡಿ ಮಾತನಾಡುವುದು ಸೂಕ್ತವಾದ ಬೆಳವಣಿಗೆಯಲ್ಲ. ಪ್ರಸ್ತುತ ಸಂತ್ರಸ್ತೆ ತೀವ್ರ ತರಹದ ನೋವು ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹೆಚ್ಚು ಸಾರ್ವಜನಿಕರು ಪದೇ ಪದೆ ಭೇಟಿ ಮಾಡುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜತೆಗೆ, ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ತೊಂದರೆಯಾಗುವ ಸಾಧ್ಯತೆಯಿರಲಿದೆ. ಆದ ಕಾರಣ ಸಾರ್ವಜನಿಕರ ಭೇಟಿಗೆ ಕಡಿವಾಣ ಹಾಕುತ್ತಿರುವುದಾಗಿ ಪೀಠ ತಿಳಿಸಿದೆ.
ಜತೆಗೆ, ಯಾವುದೇ ವ್ಯಕ್ತಿ, ಸಾರ್ವಜನಿಕರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಅಥವಾ ಅಂತಹವರ ಭೇಟಿಗೆ ಅವಕಾಶ ನೀಡಬಾರರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯಾಧಿಕಾರಿ ಲಿಖಿತ ಪೂರ್ವಾನುಮತಿ ಇಲ್ಲದೇ, ಇತರರ ಭೇಟಿಗೆ ಅವಕಾಶ ನೀಡಬಾರದು ಎಂದು ಪೀಠ ತಿಳಿಸಿದೆ. ಅಲ್ಲದೆ, ಸಂತ್ರಸ್ತೆಯ ಕುಟುಂಬ ಸದಸ್ಯರು, ಶಾಸನಬದ್ಧ ಸಂಸ್ಥೆಗಳು, ಆಯೋಗಗಳು ಹಾಗೂ ತನಿಖಾ ಸಂಸ್ಥೆಗಳ ಪ್ರತಿನಿಧಿಗಳು ಭೇಟಿ ನೀಡುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಬೆಳಗಾವಿ ತಾಲೂಕಿನ ಗ್ರಾಮವೊಂದರಲ್ಲಿ ಅದೇ ಗ್ರಾಮದ ಯುವತಿಯನ್ನು ಅವರದ್ದೇ ಸಮುದಾಯದ ಯುವಕ ಪ್ರೀತಿಸಿದ್ದು, ಜೋಡಿ ಪರಾರಿಯಾಗಿತ್ತು. ಇದೇ ಕಾರಣದಿಂದ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಮಧ್ಯರಾತ್ರಿಯಲ್ಲಿ ಬೆತ್ತಲೆಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಪರಿಶೀಲಿಸಿ ಹೈಕೋರ್ಟ್ ಸ್ವಯಂಪ್ರೇರಿತ ಸ್ವಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಈ ನಡುವೆ ಡಿಸೆಂಬರ್ 18ರಂದು ಬೆಳಗಾವಿ ಪೊಲೀಸ್ ಆಯುಕ್ತರು ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ಸೂಚನೆ ನೀಡಿತ್ತು. ಜೊತೆಗೆ, ಆರೋಪಿಗಳನ್ನು ಬಂಧಿಸಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತ್ತು.
ಇದನ್ನೂ ಓದಿ: ಬೆಳಗಾವಿ: ಸಂತ್ರಸ್ತ ಮಹಿಳೆ ಆರೋಗ್ಯ ವಿಚಾರಿಸಿದ ರಾಷ್ಟ್ರೀಯ ಎಸ್ಟಿ ಆಯೋಗದ ಸದಸ್ಯರು