ಬೆಳಗಾವಿ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಇಂದು ಕೆಲ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕರವೇ ಶಿವರಾಮೇಗೌಡ ಬಣದಿಂದ ಕೂಡ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಕರವೇ ಜಿಲ್ಲಾಧ್ಯಕ್ಷ ವಾಜೀದ ಹಿರೇಕೂಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
"ನಮ್ಮದು ನಮ್ಮದು ಕಾವೇರಿ ನಮ್ಮದು" ಎಂದು ಘೋಷಣೆ ಕೂಗಿದ ಕರವೇ ಕಾರ್ಯಕರ್ತರ ಪ್ರತಿಭಟನೆಗೆ ರೈತ ಸಂಘಟನೆಗಳೂ ಕೂಡ ಸಾಥ್ ಕೊಟ್ಟವು. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಹೋರಾಟಗಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಸ್ತೆ ಮೇಲೆ ಉರುಳಾಡಿದರು. ಬಳಿಕ ಅವರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.
ಇನ್ನು ಜಿಲ್ಲೆಯಲ್ಲಿ ಬಂದ್ ಬಿಸಿ ಯಾವುದೇ ರೀತಿ ತಟ್ಟಿಲ್ಲ. ಕೆಎಸ್ಆರ್ಟಿಸಿ ಬಸ್, ಖಾಸಗಿ ವಾಹನಗಳ ಓಡಾಟ ಎಂದಿನಂತಿದ್ದು, ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿಲ್ಲ. ಹೋಟೆಲ್, ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗ್ಗೆ ಪ್ರತಿಭಟನೆಯಿಂದಾಗಿ ಬಸ್ ಸಂಚಾರ ಸ್ಥಗಿತವಾಗಿ, ಕೆಲ ಕಾಲ ಪ್ರಯಾಣಿಕರು ಪರದಾಡಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಬಳಿಕ ಸುಗಮ ಬಸ್ ಸಂಚಾರ ಆರಂಭವಾಯಿತು. ಅಲ್ಲದೇ ಅಂಗಡಿ ಮುಂಗಟ್ಟು ಓಪನ್ ಇದ್ದು, ಜನರ ಓಡಾಟ ಎಂದಿನಂತೆ ಸಹಜವಾಗಿದೆ.
ಯಾದಗಿರಿಯಲ್ಲಿ ಕರವೇ ಕಾರ್ಯಕರ್ತರು ಪೊಲೀಸರ ವಶ: ಇನ್ನು ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರಿಂದ ಯಾದಗಿರಿಯಲ್ಲಿ ತಮಿಳುನಾಡಿಗೆ ನೀರು ಬಿಡುವ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು. ರೈಲ್ವೆ ನಿಲ್ದಾಣದ ಮುಖ್ಯ ದ್ವಾರದ ಬಳಿಯೇ ಪ್ರತಿಭಟನೆ ನಡೆಸಿದರು. ನಂತರ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆಯಲು ಕರವೇ ಕಾರ್ಯಕರ್ತರು ಮುಂದಾದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಒಟ್ಟು 20ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ, 'ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯ. ಇದನ್ನು ನಾವು ಸಹಿಸುವುದಿಲ್ಲ. ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು ಮನವಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಬಂದ್ಗೆ ಯಾದಗಿರಿ ನಗರದಲ್ಲಿ ಸದ್ಯಕ್ಕೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ನಗರದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ವ್ಯಾಪಾರ ತೆರೆದಿವೆ. ಖಾಸಗಿ ವಾಹನ, ಆಟೋ ಸಂಚಾರ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ ಯಥಾಸ್ಥಿತಿಯಿದ್ದು, ಜನರು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಹೊಟೇಲ್, ಟೀ ಶಾಪ್ ಎಂದಿನಂತೆ ಕಾರ್ಯನಿರ್ವಹಿಸಿತ್ತಿದ್ದು, ಶಾಲಾ-ಕಾಲೇಜುಗಳು, ಮಾರುಕಟ್ಟೆ ವ್ಯವಹಾರ ನಡೆದವು. ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರದಿರುವುದು ಕಂಡು ಬಂತು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ: ಜಿಲ್ಲೆಯಲ್ಲಿ ಎಂದಿನಂತೆ ವಾಹನ ಸಂಚಾರ