ಚಿಕ್ಕೋಡಿ: ಭೀಕರ ಹಿಂಸಾಚಾರದಿಂದ ನರಳುತ್ತಿರುವ ಈಶಾನ್ಯ ರಾಜ್ಯ ಮಣಿಪುರದ ನಿರಾಶ್ರಿತರಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ನೀಡಲು ಕಣ್ಣೇರಿ ಮಠ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜನರೂ ಕೂಡಾ ಕೈಜೋಡಿಸುವಂತೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಣ್ಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಮನವಿ ಮಾಡಿದ್ದಾರೆ.
ಮಠದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದಾಳಿಗೊಳಗಾದ ಸಾವಿರಾರು ಕುಟುಂಬಗಳಿಗೆ ಆಹಾರ ಪದಾರ್ಥ ಮುಟ್ಟಿಸುವ ನಿರ್ಣಯ ಮಾಡಿದ್ದೇವೆ. ಕಷ್ಟಕಾಲಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ. ನೀವು ನಿಮ್ಮ ಕಡೆಯಿಂದ ಹಾಗೂ ನಿಮ್ಮ ಅಕ್ಕಪಕ್ಕದ ಜನರಿಂದ ಹಣ ಸಂಗ್ರಹಿಸಿ ಕಣ್ಣೇರಿ ಮಠಕ್ಕೆ ತಲುಪಿಸಿ. ನಾವು ಇದೇ ತಿಂಗಳು ಆಗಸ್ಟ್ 8, 9ರಂದು ಮಣಿಪುರಕ್ಕೆ ಹೋಗಿ ಮಠದಿಂದ ಸಹಾಯ ಒದಗಿಸುತ್ತೇವೆ" ಎಂದು ಭಕ್ತರಿಗೆ ಮನವಿ ಮಾಡಿದ್ದಾರೆ.
"ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ನಡೆಯುತ್ತಿದೆ. 80 ಗ್ರಾಮಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರ ಶಿಬಿರದಲ್ಲಿ ಬದುಕುತ್ತಿದ್ದಾರೆ. ಯಾವುದೇ ವ್ಯಾಪಾರ ವಹಿವಾಟಿಲ್ಲದೆ ಅಲ್ಲಿ ಆಹಾರ ಪದಾರ್ಥಗಳು ಖಾಲಿಯಾಗಿವೆ" ಎಂದು ಶ್ರೀಗಳು ವಿವರಿಸಿದರು.
"ದಾಳಿಗೊಳಗಾದ ಗ್ರಾಮಗಳ ಸಹಾಯಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಅಂತಹ ಗ್ರಾಮಗಳ ಮನೆಯಲ್ಲಿ ತಿನ್ನಲು ಏನೂ ಇಲ್ಲ. ಹಸಿವು ತಾಳಲಾರದೆ ಜನರು ತಮ್ಮ ಮನೆ ಮುಂದಿನ ಬಾಳೆ ಗಿಡಗಳನ್ನೇ ಕಡಿದು ಕುದಿಸಿ ತಿನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸುಮ್ಮನಿರುವುದು ಸರಿಯಲ್ಲ. ಹೀಗಾಗಿ, ನಾವು ಆಗಸ್ಟ್ 8ರಂದು ಮಣಿಪುರಕ್ಕೆ ತೆರಳುವ ನಿರ್ಧಾರ ಮಾಡಿದ್ದೇವೆ" ಎಂದು ಶ್ರೀಗಳು ಹೇಳಿದರು.