ಬೆಳಗಾವಿ: ಬೆಳಗಾವಿಯಲ್ಲಿ ಕನ್ನಡ ನಾಮಫಲಕ ಹಾಕೋದೇ ತಪ್ಪಾ.. ಕನ್ನಡ ನಾಮಫಲಕ ಹಾಕಿದರೆ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಾ.. ಎಂಬ ಇಂಥದ್ದೊಂದು ಅನುಮಾನ ಈಗ ಈ ಭಾಗದ ಕನ್ನಡ ಹೋರಾಟಗಾರರಲ್ಲಿ ಕಾಡತೊಡಗಿದೆ.
ಬೆಳಗಾವಿ ತಾಲೂಕಿನ ಗ್ರಾ.ಪಂ.ಅಧ್ಯಕ್ಷೆ ಯೋಗಿತಾ ಬೆನ್ನಾಳ್ಕರ್ ಕನ್ನಡ ನಾಮಫಲಕ ತೆರವುಗೊಳಿಸುವಂತೆ ಕನಕದಾಸ ಯುವಕ ಮಂಡಳದ ಕಾರ್ಯಕರ್ತರಿಗೆ ಪತ್ರ ಬರೆದಿದ್ದಾರೆ. ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಚ್ಚಿದ್ದಕ್ಕೆ ಹಲ್ಲೆ ಪ್ರಕರಣದಂತಹ ಘಟನೆಗಳು ನಡೆಯುತ್ತವೆ. ಕನ್ನಡ ನಾಮಫಲಕ ಹಚ್ಚಿದ್ದು, ಹಲ್ಲೆಗೆ ಕಾರಣ ಎಂಬರ್ಥದಲ್ಲಿ ಗ್ರಾ.ಪಂ.ಅಧ್ಯಕ್ಷೆ ಧಾಮನೆ ಪತ್ರ ಬರೆದಿದ್ದಾರೆ.
ಓದಿ: ಪುನೀತ್ ನಾಮಫಲಕ, ಕನ್ನಡಬಾವುಟ ಕೆರೆಗೆ ಬಿಸಾಡಿದ ಕಿಡಿಗೇಡಿಗಳು : ಗ್ರಾಮಸ್ಥರಿಂದ ಪ್ರತಿಭಟನೆ
ಧಾಮನೆ ಗ್ರಾಮದ ಕುರುಬರಹಟ್ಟಿಯಲ್ಲಿ ಕನ್ನಡಿಗರು ಕಿತ್ತೂರು ಚನ್ನಮ್ಮ ನಗರ ಎಂದು ಕನ್ನಡ ನಾಮಫಲಕ ಹಾಕಿದ್ದರು. ಇದಾದ ಎರಡು ತಿಂಗಳ ಬಳಿಕ ಎಂಇಎಸ್ ಕಾರ್ಯಕರ್ತರು ಧರ್ಮವೀರ ಛತ್ರಪತಿ ಸಂಭಾಜಿ ನಗರ ಎಂದು ಮರಾಠಿ ನಾಮಫಲಕ ಹಾಕಿದ್ದರು. ಕನ್ನಡ ನಾಮಫಲಕದ ಎದುರೇ ಮರಾಠಿ ನಾಮ ಫಲಕ ಅಳವಡಿಸಲಾಗಿದೆ. ಮರಾಠಿ ನಾಮಫಲಕ ಅಳವಡಿಸಿದ ಎರಡು ದಿನಗಳ ಬಳಿಕ ಮದುವೆ ಮೆರವಣಿಗೆ ವೇಳೆ ಕಿರಿಕ್ ಆಗಿದೆ. ಕನ್ನಡ ಹಾಡು ಹಚ್ಚಿದ್ದಕ್ಕೆ ವಧು - ವರ ಸೇರಿದಂತೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿ 8 ಎಂಇಎಸ್ ಪುಂಡರನ್ನು ಪೊಲೀಸರು ಬಂಧಿಸಿದ್ದರು.
ಈಗ ಗ್ರಾ.ಪಂ. ಅಧ್ಯಕ್ಷೆ ಧಾಮನೆಯ ಕನಕದಾಸ ಯುವಕ ಮಂಡಳಿಗೆ ಪತ್ರ ಬರೆದು ಕನ್ನಡ ನಾಮಫಲಕ ಹಾಕಿದ್ದರಿಂದ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಆಗುತ್ತಿದೆ. ನೋಟಿಸ್ ಮುಟ್ಟಿದ ತಕ್ಷಣ ಕನ್ನಡ ನಾಮಫಲಕ ತೆರವುಗೊಳಿಸಿ ಎಂದು ಉಲ್ಲೇಖಿಸಲಾಗಿದೆ. ಧಾಮನೆ ಗ್ರಾ.ಪಂ. ಅಧ್ಯಕ್ಷರ ನಡೆಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡ ನಾಮಫಲಕ ತೆರವು ಮಾಡಲ್ಲ. ಒಂದು ವೇಳೆ ಕನ್ನಡ ನಾಮಫಲಕ ತೆರವು ಮಾಡಿದರೆ, 'ಧಾಮನೆ ಚಲೋ' ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.