ಚಿಕ್ಕೋಡಿ : ಕೊರೊನಾ ಮಧ್ಯ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿದ್ದಾರೆ. ಆದರೆ, ರಾಜ್ಯದ ಗಡಿ ನೆಲದಲ್ಲಿಯೇ ಕರಾಳ ದಿನ ಆಚರಿಸಲು ಮುಂದಾಗಿರುವ ಮಂಗಸೂಳಿ ಗ್ರಾಮಸ್ಥರಿಗೆ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ನ.1ರಂದು ಕರಾಳ ದಿನಾಚರಣೆ ಆಚರಿಸಿಕೊಂಡು ಬರುತ್ತಿತ್ತು. ಆದರೆ, ಈ ವರ್ಷ ಮೊದಲ ಬಾರಿಗೆ ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ನೇತೃತ್ವದಲ್ಲಿ ನ.1ರಂದು ಬಂದ್ ಮಾಡಿದ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸುವುದರ ಮೂಲಕ ಮಂಗಸೂಳಿ ಗ್ರಾಮದ ಕನ್ನಡಿಗರ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದ್ದಾರೆ.
ಕಾಗವಾಡ ತಾಲೂಕಿನ ಗಡಿ ಗ್ರಾಮವಾದ ಮಂಗಸೂಳಿಯಲ್ಲಿ ಕೆಲವೂ ಎಂಇಎಸ್ ಪುಂಡರು, ಕರ್ನಾಟಕ ರಾಜೋತ್ಸವದಂದು ಕರಾಳ ದಿನವನ್ನಾಗಿ ಆಚರಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ. ಮಂಗಸೂಳಿ ಗ್ರಾಮ ಪಂಚಾಯತ್‌ನಲ್ಲಿ ಕಾಗವಾಡ ತಹಶೀಲ್ದಾರ್ ಹಾಗೂ ಅಥಣಿ ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಸಭೆ ಕರೆದು ಅಂಗಡಿ- ಮುಂಗಟ್ಟುಗಳನ್ನು ಪ್ರಾರಂಭಿಸುವಂತೆ ಹೇಳಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದಲೂ ಕರಾಳ ದಿನಾಚರಣೆ ಆಚರಿಸಿಕೊಂಡು ಬರುತ್ತಿರುವ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿದೆ. ಪ್ರಥಮ ಬಾರಿಗೆ ಕಾಗವಾಡ ತಾಲೂಕಾಡಳಿತ ಮಂಗಸೂಳಿ ಗ್ರಾಮದಲ್ಲಿ ನ.1 ರಂದು ಅಂಗಡಿ-ಮುಂಗಟ್ಟು ತೆರೆಯುವುದರ ಮೂಲಕ ಮಂಗಸೂಳಿ ಗ್ರಾಮದಲ್ಲಿ ಹೊಸ ಇತಿಹಾಸ ರೂಪಿಸಿದೆ.