ಚಿಕ್ಕೋಡಿ : ಉಪ ಚುನಾವಣೆಯಲ್ಲಿ ನಿರಂತರ ಪ್ರಚಾರದಿಂದ ದಣಿದಿದ್ದ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಈಗ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಉಪ ಚುನಾವಣೆ ವೇಳೆ ನಿರಂತರ ಪ್ರಚಾರದಲ್ಲಿ ತೊಡಗಿದ್ದ ಶ್ರೀಮಂತ್ ಪಾಟೀಲ್ ಬಳಿಕ ಅಸ್ವಸ್ಥಗೊಂಡಿದ್ದರು. ಅಲ್ಲದೆ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಉಪ ಚುನಾವಣೆ ಫಲಿತಾಂಶದಲ್ಲಿ ಗೆಲವು ಸಾಧಿಸಿದ್ದರೂ, ಮತ ಎಣಿಕೆ ಕೇಂದ್ರಕ್ಕೂ ಅವರು ಆಗಮಿಸಿರಲಿಲ್ಲ. ಕಾರ್ಯಕರ್ತರನ್ನು ಭೇಟಿ ಆಗಲೂ ಸಾಧ್ಯವಾಗಿಲ್ಲ.
ಆಪ್ತ ಮೂಲಗಳ ಪ್ರಕಾರ ಶ್ರೀಮಂತ್ ಪಾಟೀಲ್ ಇಂದು ಡಿಸ್ಚಾರ್ಜ್ ಆಗಿ ತಮ್ಮ ಕೆಂಪವಾಡ ಸಕ್ಕರೆ ಕಾರ್ಖಾನೆಗೆ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಆಗಲಿದ್ದಾರೆ ಎಂದು ತಿಳಿದು ಬಂದಿದೆ.