ಅಥಣಿ: ಕೊರೊನಾ ಸೇನಾನಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಅಭಿಮಾನಿ ಬಳಗ ಹಾಗೂ ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಶ್ರೀ ಪ್ರತ್ಯಾಂಗಿರ ಪಂಚಮುಖ ವೇದ ಧರ್ಮ ಟ್ರಸ್ಟ್ ತಯಾರಿಸಿರುವ ರೋಗ ನಿರೋಧಕ ಶಕ್ತಿಯ ವೃದ್ದಿಗಾಗಿ ಕಬಾಸುರ ಆಯುರ್ವೇದಿಕ್ ಚೂರ್ಣವನ್ನು ಉಚಿತವಾಗಿ ವಿತರಿಸಲಾಯಿತು.
ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ, ಪುರಸಭೆ ಸಿಬ್ಬಂದಿ ಸೇರಿದಂತೆ ಪತ್ರಕರ್ತರಿಗೂ ಆಯುರ್ವೇದ ಚೂರ್ಣವನ್ನು ವಿತರಣೆ ಮಾಡಲಾಯಿತು. ಈ ವೇಳೆ, ಮಾತನಾಡಿದ ವಕೀಲ ಸುಶೀಲಕುಮಾರ ಪತ್ತಾರ ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟಿರೀಯಲ್, ಆ್ಯಂಟಿ ಫಂಗಲ್, ಆ್ಯಂಟಿ ಅಸ್ತಮೇಟಿಕ್ ಹಾಗೂ ರಾಸಾಯನಿಕಗಳಿಂದ ಲೀವರ್ ರಕ್ಷಣೆ ಮಾಡುವ ಗುಣವನ್ನು ಹೊಂದಿರುವ ಈ ಆಯುರ್ವೇದ ಚೂರ್ಣವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಅಷ್ಟೇ ಅಲ್ಲದೆ ಸ್ವಾಶಕೋಶಗಳ ಶಕ್ತಿ ಹೆಚ್ಚಿಸಿ ಉಸಿರಾಟ ಸಂಬಂಧಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಪಡಿಸುತ್ತದೆ.
ಆದ್ದರಿಂದ ಕೊರೊನಾ ವಾರಿಯರ್ಸ್ಗಳಿಗೆ ಈ ಚೂರ್ಣವನ್ನು ಉಚಿತವಾಗಿ ಹಂಚುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಎಲ್ಲ ಕೊರೊನಾ ವಾರಿಯರ್ಸ್ಗಳು ಆರೋಗ್ಯ ವೃದ್ದಿಸಿಕೊಳ್ಳಬೇಕು. ಇಂದು ಸುಮಾರು ಒಂದು ಸಾವಿರ ಜನರಿಗೆ ಉಚಿತವಾಗಿ ಈ ಔಷಧವನ್ನು ವಿತರಿಸಲಾಗುವುದು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಾಸ್ಕ ಧರಿಸಿ, ಸ್ಯಾನಿಟೈಸರ್ ಬಳಸಿ ಕೊರೊನಾ ತೊಲಗಿಸಲು ಸಹಕರಿಸಬೇಕು ಎಂದರು.