ಬೆಳಗಾವಿ: ಮಹಾನಗರ ಪಾಲಿಕೆಯ 2021-22ನೇ ಸಾಲಿನ ಆಯವ್ಯಯದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಮೀಸಲಿಟ್ಟಿರುವ 25 ಲಕ್ಷ ರೂಪಾಯಿ ಅನುದಾನ ಬಳಕೆಗೆ ಪತ್ರಕರ್ತರು ನೀಡಿರುವ ಸಲಹೆಗಳನ್ನು ಆಧರಿಸಿ ಸ್ಪಷ್ಟ ಮಾರ್ಗಸೂಚಿ ರಚಿಸಲಾಗುವುದು ಎಂದು ಪಾಲಿಕೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಬಳಕೆಗೆ ಸಂಬಂಧಿಸಿದಂತೆ ನಡೆದ ಪತ್ರಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಹಾಗೂ ನಿಧಿ ಬಳಕೆಗೆ ಮಾರ್ಗಸೂಚಿ ಇಲ್ಲದಿರುವುದರಿಂದ ಕಳೆದ ಸಾಲಿನ ಅನುದಾನ ಬಳಕೆ ಮಾಡುವುದು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಈ ಬಾರಿ ವರ್ಷದ ಆರಂಭದಲ್ಲಿಯೇ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗಿದೆ. ಪತ್ರಕರ್ತರ ಆಶಯದಂತೆ ಕ್ಷೇಮಾಭಿವೃದ್ಧಿ ನಿಧಿ ಬಳಕೆಗೆ ಮಾರ್ಗಸೂಚಿ ರೂಪಿಸಲಾಗುವುದು .
ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಮೆಹಬೂಬ್ ಮಕಾನದಾರ, ರಾಜ್ಯಮಟ್ಟದ ಪತ್ರಿಕೆಗಳ ಸಿಬ್ಬಂದಿಗೆ ನೇಮಕಾತಿ ಪತ್ರ ಹಾಗೂ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡ್ ಆಧರಿಸಿ ಹಾಗೂ ಸ್ಥಳೀಯ ಪತ್ರಿಕೆಗಳ ಸಿಬ್ಬಂದಿಗೆ ಆಯಾ ಸಂಸ್ಥೆಯ ಶಿಫಾರಸು ಪತ್ರ ಆಧರಿಸಿ ಸೌಲಭ್ಯ ನೀಡಬೇಕು. ಪತ್ರಕರ್ತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರವೇಶ ಶುಲ್ಕ, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಹಾಗೂ ಪತ್ರಕರ್ತರ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ ನೀಡಬೇಕು ಎಂದು ಸಲಹೆ ನೀಡಿದರು.