ಬೆಳಗಾವಿ: ಬಿಜೆಪಿಯವರಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನು ತಗೊಂಡು ಹೋಗ್ತಿದ್ದಾರೆ. ಬಿಜೆಪಿಯವರು ಬೀಜ ಇಲ್ಲದವರು ಎಂದು ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯ ಮಾಡಿದರು.
ಬಿಜೆಪಿಯನ್ನು ಟೀಕಿಸಿದ ಇಬ್ರಾಹಿಂ: ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿಜಯಪುರ ಜೆಡಿಎಸ್ ಶಾಸಕ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೇನಾ ನಿಮಗೆ ಮೋದಿ ಕಲಿಸಿರುವುದು. ನಮಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ನೀವು ನೂರು ಜನರನ್ನು ಕರೆದುಕೊಂಡು ಹೋದರೂ ನೂರು ಜನರನ್ನು ಹುಟ್ಟಿಸುವ ತಾಕತ್ತು ನಮಗಿದೆ. ನಾವು ರೈತರು. 50 ಆಕಳ ಕಟ್ಟಿದ್ರೆ ಒಂದೇ ಹೋರಿ ಕಟ್ಟೋದು. 50 ಹೋರಿ ಕಟ್ಟಲ್ಲ. ಹಾಗೆಯೇ, ಇವತ್ತು ಜನತಾದಳ, ದೇವೇಗೌಡರ ಬೀಜ ಬಲವಾಗಿದೆ. ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಎಂದು ಹೇಳಿದರು. ಇಂದು ಮತ್ತು ನಾಳೆ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಂಚರತ್ನ ಕಾರ್ಯಕ್ರಮದಡಿ ಜನರ ಅಭಿವೃದ್ಧಿ: ಮುಂದಿನ ಚುನಾವಣೆಯಲ್ಲಿ ಮರಾಠ, ಲಿಂಗಾಯತ ಸಮಾಜ, ಹಿಂದುಳಿದ ಹಾಗೂ ದಲಿತರಿಗೆ ಪ್ರಾಮುಖ್ಯತೆ ನೀಡುತ್ತೇವೆ. ಜಿಲ್ಲೆಯ 18 ಕ್ಷೇತ್ರದ ಭೌಗೋಳಿಕ ಸಮಸ್ಯೆ ಮತ್ತು ಜನರನ್ನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಪಕ್ಷ ರಾಷ್ಟ್ರೀಯ ಪಕ್ಷ ಅಲ್ಲ. ಜೆಡಿಎಸ್ ರಾಜ್ಯದ ಜನರಿಗಾಗಿ ಹುಟ್ಟಿದ ಪಕ್ಷ. 2023ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗ್ತಾರೆ. ನಾವು ಪಂಚರತ್ನ ಕಾರ್ಯಕ್ರಮದಲ್ಲಿ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ ನೀಡುತ್ತೇವೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಪಂಚಾಯತಿ ವ್ಯಾಪ್ತಿಯಲ್ಲಿ ಆಧುನಿಕ ಶಾಲೆ, ಉತ್ತಮ ಗುಣಮಟ್ಟದ ಆಸ್ಪತ್ರೆಗಳ ನಿರ್ಮಾಣದ ಜೊತೆಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಪ್ರತಿಯೊಬ್ಬರಿಗೂ ವಾಸಕ್ಕೆ ಮನೆಗಳು, ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಎಲ್ಲರಿಗೂ ಕುಡಿಯುವ ನೀರಿನ ಜೊತೆಗೆ ರೈತರ ಭೂಮಿಗೆ ನೀರು ಒದಗಿಸುತ್ತೇವೆ ಎಂದರು. ಇನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಜನರಿಗೆ ಇಂತಹುದೇ ಕಾರ್ಯಕ್ರಮ ನೀಡುತ್ತೇವೆ ಎಂದು ಹೇಳಿಲ್ಲ. ರಾಹುಲ್ ಗಾಂಧಿ ಬಂದರು ರಾಜ್ಯದಲ್ಲಿ ಪಾದಯಾತ್ರೆ ಮಾಡಿ ಹೋದರು. ನಾವು ಯಾರನ್ನೂ ದೂರುವುದಿಲ್ಲ ಎಂದು ಹೇಳಿದರು.
ಯಾವ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ನಾನು ಕಿಂಗ್ ಆಗಲ್ಲ. ಕಿಂಗ್ ಮೇಕರ್ ಆಗೋ ಆಸೆ ಇದೆ ಎಂದರು.
ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಒಳ್ಳೆಯದು: ಇಬ್ರಾಹಿಂ ಬಿಟ್ಟ ಬಳಿಕ ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಒಳ್ಳೆಯದು. ಸಿದ್ದರಾಮಯ್ಯ ಅವರು ಮೊದಲು ಅವರು ತಮ್ಮ ಸ್ವಂತ ಶಕ್ತಿಯನ್ನು ನಂಬಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಸೇರಿ ಪಕ್ಷದ ನಾಯಕರ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ: ರಮೇಶ್ ಕುಮಾರ್