ಬೆಳಗಾವಿ:ಜೆಡಿಎಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ ಹಾಗೂ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜುನಾಥ ಗೌಡರಿಗೆ ಕಾಂಗ್ರೆಸ್ ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಡಿಕೆಶಿ ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಮಂಜುನಾಥ ಗೌಡ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆ ನಮಗೆ ದೊಡ್ಡ ಶಕ್ತಿ ಆಗಲಿದೆ. ಶಿವಮೊಗ್ಗ ಜಿಲ್ಲೆಯ ಸಹಕಾರ ರಂಗದಲ್ಲಿ ಮಂಜುನಾಥ ಗೌಡರ ಸೇವೆ ಅನನ್ಯವಾಗಿದೆ ಎಂದು ಬಣ್ಣಿಸಿದರು.
ಸೋನಿಯಾ ಗಾಂಧಿ ಮೇಲಿನ ನಂಬಿಕೆ, ಕಾಂಗ್ರೆಸ್ ತತ್ತ್ವ ಸಿದ್ಧಾಂತ ಒಪ್ಪಿ ಮಂಜುನಾಥ ಗೌಡ ಕಾಂಗ್ರೆಸ್ ಸೇರಿದ್ದಾರೆ. ಜಾತ್ಯತೀತ ಮನೋಭಾವದ ಎಲ್ಲ ಸಂಘಟನೆ ನಾಯಕರು, ಮುಖಂಡರು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡುತ್ತೇನೆ. ಲಖನ್ ಜಾರಕಿಹೊಳಿ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾನು ಯಾರನ್ನೂ ಮನವೊಲಿಸುವುದಿಲ್ಲ. ಪಕ್ಷಬಿಟ್ಟು ಹೋಗುವವರು ಹೋಗಲಿ ಎಂದರು.