ಬೆಳಗಾವಿ : ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಆಪರೇಟರ್ನನ್ನು ಭೀಕರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಸವದತ್ತಿ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ನಡೆದಿದೆ.
ಶ್ರೀಕಾಂತ ಕಳ್ಳಿಮನಿ (22) ಕೊಲೆಗೀಡಾದವನು. ಸವದತ್ತಿ ಮೂಲದ ಚಿದಂಬರ ಆಡಿನ್ ಎಂಬುವರಿಗೆ ಸೇರಿದ ಜೆಸಿಬಿಯನ್ನು ಕಳೆದ ಹಲವು ವರ್ಷಗಳಿಂದ ಶ್ರೀಕಾಂತ ಆಪರೇಟ್ ಮಾಡುತ್ತಿದ್ದ. ಶ್ರೀಕಾಂತ ಕಳೆದೊಂದು ವಾರದಿಂದ ಸವದತ್ತಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯಲ್ಲಿ ತೊಡಗಿದ್ದ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಸವದತ್ತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.