ಅಥಣಿ: ಪಟ್ಟಣದಿಂದ ಐಗಳಿ ಕ್ರಾಸ್ವರೆಗೆ ವಿಜಯಪುರ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಿಂದ ವಿಜಯಪುರ ಅಂತಾರಾಜ್ಯ ರಸ್ತೆ ಸಂಚಾರ ಅಪಾಯದ ಮಟ್ಟ ತಲುಪಿದ್ದು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ಏರ್ಪಟ್ಟಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಿಂದ ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಕ್ಕೆ ಅಥಣಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಸದ್ಯ ಈ ರಸ್ತೆ ಸರಿಯಾದ ನಿರ್ವಹಣೆ ಇಲ್ಲದೆ ಹದಗೆಟ್ಟಿದ್ದು, ಪ್ರವಾಸಿಗರು ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಎರಡೂ ಬದಿಗಳಲ್ಲಿ ಆಳವಾದ ತಗ್ಗು ಬಿದ್ದಿರುವ ಪರಿಣಾಮ ಅದೆಷ್ಟೋ ಬೈಕ್ ಸವಾರರು ಆಯ ತಪ್ಪಿ ಬಿದ್ದು ಸಾವು ನೋವು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಅಲ್ಲದೆ ರಸ್ತೆಯ ನಟ್ಟ ನಡುವೆ ತಗ್ಗು ಗುಂಡಿಗಳ ತಪ್ಪಿಸಲು ಹೋಗಿ ದೊಡ್ಡ ವಾಹನಗಳ ಅಪಘಾತಗಳು ಸಾಮಾನ್ಯವಾಗಿವೆ. ಇದರಿಂದ ವಾರದಲ್ಲಿ ಒಂದಾದರೂ ಅಪಘಾತವಾಗಿ ಜೀವ ಹಾನಿ ಸಂಭವಿಸುತ್ತದೆ ಎನ್ನುತ್ತಾರೆ ದಿನನಿತ್ಯ ಸಂಚಾರ ಮಾಡುವ ಸ್ಥಳೀಯರು.