ಬೆಳಗಾವಿ: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿ, ಸಿಬಿಐ ಸ್ವತಂತ್ರ ಸಂಸ್ಥೆಗಳು. ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ಈ ಸಂಸ್ಥೆಗಳು ರಚನೆ ಆಗಿಲ್ಲ. ಹಿಂದೆ ಯುಪಿಎ ಸರ್ಕಾರವಿದ್ದಾಗಲೂ ವಿರೋಧ ಪಕ್ಷದಲ್ಲಿದ್ದ ನಾಯಕರನ್ನು ಬಂಧಿಸಲಾಗಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ವಿಶೇಷತೆ ಏನೂ ಇಲ್ಲ. ಐಟಿ ದಾಳಿಯಿಂದ ಹಲವು ವಿಚಾರ ಹೊರಗೆ ಬಂದಿದೆ. ಆ ನಿಟ್ಟಿನಲ್ಲಿ ಇಡಿ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದರು.
ಡಿಕೆಶಿ ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇಲ್ಲ. ನ್ಯಾಯಾಲಯ ಎಲ್ಲವನ್ನೂ ಗಮನಿಸುತ್ತಿದೆ. ಪ್ರಕರಣವನ್ನು ರಾಜಕೀಯಗೊಳಿಸುವುದು, ರಾಜಕಾರಣದ ಮೂಲಕ ಪರಿಹಾರ ಹುಡುಕುವುದು ಸರಿಯಲ್ಲ. ನೀವು ತಪ್ಪು ಮಾಡಿಲ್ಲ ಅಂದ್ರೆ ವಿಚಾರಣೆ ಎದುರಿಸಿ, ನ್ಯಾಯಾಲಯದ ಮೂಲಕ ಆರೋಪ ಮುಕ್ತರಾಗಿ ಎಂದು ಡಿಕೆಶಿಗೆ ಸಚಿವ ಶೆಟ್ಟರ್ ಸಲಹೆ ನೀಡಿದರು.
ಸಮುದಾಯದ ಜನರಿಂದ ಪ್ರತಿಭಟನೆ ನಡೆಸುವುದರಿಂದ ಯಾವುದೇ ಸಾಧನೆ ಆಗಲ್ಲ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಿಜವಾಗಿಯೂ ನ್ಯಾಯ ಸಿಗಬೇಕು ಅಂದ್ರೆ ಡಿಕೆಶಿ ಕೋರ್ಟ್ಗೆ ಹೋಗಬೇಕು ಎಂದರು.