ಅಥಣಿ: ರೈತರು ಒಗ್ಗಟ್ಟಿನಿಂದ ಇದ್ದರೆ ಮಾತ್ರ ರೈತ ವಿರೋಧಿ ಕಾಯ್ದೆ ಹಾಗೂ ಖಾಸಗೀಕರಣದ ವಿರುದ್ಧ ಹೋರಾಡಲು ಸಾಧ್ಯ. ಪ್ರತಿ ಗ್ರಾಮಗಳಲ್ಲಿಯೂ ರೈತ ಸಂಘಟನೆ ಆರಂಭವಾಗಬೇಕು ಎಂದು ರೈತ ಮುಖಂಡ ಸತ್ಯಪ್ಪ ಮಾಲ್ಲಾಪುರಿ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲೂಕಿನ ಯಲಿಹಡಲಗಿ, ಸವದಿ ಗ್ರಾಮಗಳಲ್ಲಿ ನೂತನ ಶಾಖೆಗಳ ಉದ್ಘಾಟನೆ ಮತ್ತು ರೈತರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ರಾಜ್ಯ, ಜಿಲ್ಲಾ ಮತ್ತು ತಾಲೂಕು ರೈತ ಮುಖಂಡರ ಸಮ್ಮುಖದಲ್ಲಿ ಹಲವಾರು ರೈತರು ಶಾಲು ದೀಕ್ಷೆ ಪಡೆದುಕೊಂಡರು. ಈಚೆಗೆ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ, ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ, ಗಾಳಿಯಲ್ಲಿ ಶಾಲು ತಿರುಗಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಲ್ಲಿ ಕಾಯ್ದೆಗಳ ಬಗ್ಗೆ ಜಾಗೃತಿ ಹೆಚ್ಚಿಸಬೇಕು. ಇಲ್ಲವಾದರೆ ವಂಚಕರು ಹೆಚ್ಚಾಗುತ್ತಾರೆ. ಚುನಾವಣೆ ಸಂದರ್ಭದಲ್ಲಿ ಯಾರು ಜಾತಿ, ಧರ್ಮ ನೋಡಿ ಮರಳಾಗಬೇಡಿ. ಯಾವುದೇ ಜಾತಿಯವನು ಬಂದರು ರೈತರಿಗೆ ಲಾಭ ಇಲ್ಲ ಎಂದು ಮಾಲ್ಲಾಪುರಿ ಹೇಳಿದರು.
ರೈತ ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರ ಜಮೀನುಗಳು ಇತಿಹಾಸದ ಪುಟ ಸೇರುವ ಪ್ರಸಂಗ ಎದುರಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು.
ರೈತರು ಬೆಳೆದ ಫಸಲಿಗೆ ಸೂಕ್ತ ಬೆಲೆ ಇಲ್ಲದೆ, ಕೃಷಿ ಮಾಡುವುದು ದುಬಾರಿಯಾಗಿದೆ. ರೈತರಿಗೆ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.